ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಹೇಳಿಕೆ ಹಿಂದಿನ ಲೆಕ್ಕಾಚಾರ ಏನು?
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಾದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಲಾಭವಾಗುತ್ತಾ? ಎರಡೆರಡು ಕಡೆ ಗುರುತಿನ ಚೀಟಿ ಹೊಂದಿರುವವರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿದರೆ ಕಾಂಗ್ರೆಸ್ ಗೆ ಮುಳುವಾಗುತ್ತಾ? ಮತದಾರರ ಸಂಖ್ಯೆ ಕಡಿಮೆಯಾದಷ್ಟು ಜೆಡಿಎಸ್ ಗೆ ಲಾಭ ಹೇಗೆ? ಇಂತದೊಂದು ಚರ್ಚೆಗೆ ಕಾರಣ ಜೆಡಿಎಸ್. ಮುಖಂಡ ಕೆ.ಎಂ. ಕೃಷ್ಣನಾಯಕ ಅವರ ಹೇಳಿಕೆ.
ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ವೇಳೆ ಕೆ.ಎಂ. ಕೃಷ್ಣನಾಯಕ ಒಂದು ಅಚ್ಚರಿಕೆಯ ಹೇಳಿಕೆ ನೀಡಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬೂತ್ ಮಟ್ಟದ ಕಾರ್ಯಕತರು ಹದ್ದಿನ ಕಣ್ಣಿಡಬೇಕು. ಬೇರೆ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದಿರುವವರು, ಮತದಾರರ ಪಟ್ಟಿ ಹೊಂದಿರುತ್ತಾರೆ. ಹೀಗಾಗಿ ಎರಡು ಕಡೆಯೂ ಮತದಾನ ಮಾಡುತ್ತಿದ್ದರು. ಆದರೆ ಈ ಬಾರಿ ಮತಪಟ್ಟಿ ಪರಿಷ್ಕರಣೆಯಾದರೆ ಒಂದು ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ಮತದಾರರ ಸಂಖ್ಯೆ ಇಳಿಕೆಯಾಗುತ್ತೆ. ಮತದಾರರ ಸಂಖ್ಯೆ ಇಳಿಕೆಯಾದಷ್ಟು ಜೆಡಿಎಸ್ ಗೆ ಹೆಚ್ಚಿನ ಲಾಭವಾಗುತ್ತೆ. ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆ ಮಾಡಿದರೆ ಜೆಡಿಎಸ್ ಗೆ ಹೆಚ್ಚಿನ ಲಾಭವಾಗಲಿದ್ದು, ಕನಿಷ್ಠ ನಾಲ್ಕು ಜಿಲ್ಲಾ ಪಂಚಾಯತ್ ಗಳಲ್ಲಿ ಗೆಲ್ಲಬಹುದು ಎಂದು ಹೇಳಿದ್ದರು. ಈ ಹೇಳಿಕೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಮತದಾರರ ಪಟ್ಟಿ ಡಿಲೀಟ್ ಆದರೆ ಯಾವ ರೀತಿ ಜೆಡಿಎಸ್ ಗೆ ಲಾಭವಾಗುತ್ತೆ ಎಂಬ ಲೆಕ್ಕಾಚಾರದಲ್ಲಿಮುಳುಗಿದ್ದಾರೆ.
ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಅವರು ಮಾತನಾಡುವಾಗ, ಗಾಳಿಯಲ್ಲಿ ಗುಂಡು ಹೊಡೆದಂತೆ ಹೇಳಿಕೆ ನೀಡುವುದಿಲ್ಲ. ಅಳೆದು ತೂಗಿ, ರಾಜಕೀಯ ಲೆಕ್ಕಾಚಾರ ಹಾಕಿಯೇ ಹೇಳಿಕೆ ಕೊಡುತ್ತಾರೆ. ಹೀಗಾಗಿ ಎಲ್ಲೂ ಕೂಡ ಪ್ರಚಾರಕ್ಕಾಗಿ ಹೇಳಿಕೆ ನೀಡಿ, ವಿವಾದ ಮೈಮೇಲೆ ಎಳೆದುಕೊಂಡಿಲ್ಲ. ಕಳೆದ 10-15 ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಕೆ.ಎಂ. ಕೃಷ್ಣನಾಯಕ, ಬೇಕಾಬಿಟ್ಟಿ ಹೇಳಿಕೆ ನೀಡಿಲ್ಲ. ಪ್ರತಿ ಬಾರಿ ಮಾತನಾಡುವಾಗಲೂ ಎಚ್ಚರಿಕೆಯಿಂದ ಮಾತನಾಡುತ್ತಾರೆ. ವರದಿಗಾರರು ಹೇಗೆ ಪ್ರಶ್ನೆ ಕೇಳಿದ್ದರೂ, ದುಡುಕಿ ಹೇಳಿಕೆ ನೀಡುವುದೇ ಇಲ್ಲ. ಈ ರೀತಿ ಇರುವಾಗ ಮತದಾರರ ಸಂಖ್ಯೆ ಕಡಿಮೆಯಾದರೆ ಜೆಡಿಎಸ್ ಗೆ ಲಾಭವಾಗುತ್ತೆ ಎಂದು ಹೇಳಿಕೆ ನೀಡಿರುವ ಹಿಂದೆ ಅಡಗಿರುವ ರಾಜಕೀಯ ಲೆಕ್ಕಾಚಾರ ಏನು ಎಂಬುದರ ಕುರಿತು ಎಲ್ಲರೂ ರಾಜಕೀಯ ಪಡಸಾಲೆಯಲ್ಲಿ ಚರ್ಚಿಸುತ್ತಿದ್ದಾರೆ.

ಯಾವ ಪಕ್ಷಕ್ಕೆ ಲಾಭ – ನಷ್ಟ?
ಮತದಾರ ಪಟ್ಟಿ ಪರಿಷ್ಕರಣೆಯಿಂದ ಅದೆಷ್ಟೋ ಮತಪಟ್ಟಿಗಳು ಡಿಲೀಟ್ ಆಗುತ್ತವೆ. 2025 ಜೂನ್ 24ರಿಂದ ಜುಲೈ 25ರವರೆಗೆ ಒಂದು ತಿಂಗಳ ಅವಧಿಯಲ್ಲಿ ನಡೆಸಿದ ಎಸ್‌ಐಆರ್ ಮೂಲಕ ಸುಮಾರು 64 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ ಮೃತರು, ಶಾಶ್ವತವಾಗಿ ವಲಸೆ ಹೋದವರು, ಬಹು ಸ್ಥಳಗಳಲ್ಲಿ ನೋಂದಾಯಿಸಲ್ಪಟ್ಟವರು ಮತ್ತು ಪತ್ತೆಹಚ್ಚಲಾಗದವರು ಸೇರಿದ್ದಾರೆ. ಅದೇ ರೀತಿ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಗುರುತಿನ ಚೀಟಿ ಪರಿಷ್ಕರಣೆಯಾದರೆ ಸಾವಿರಕ್ಕೂ ಅಧಿಕ ಮತಪಟ್ಟಿಗಳು ಡಿಲೀಟ್ ಆಗುತ್ತವೆ. ಯಾಕಂದ್ರೆ ಹೆಚ್ ಡಿ ಕೋಟೆಯಲ್ಲಿ ವಲಸಿಗರು ಜಾಸ್ತಿ ಇದ್ದಾರೆ. ವ್ಯಾಪಾರ-ಉದ್ಯಮ ಕ್ಷೇತ್ರದಲ್ಲಿ ಬಹುತೇಕ ಅನ್ಯ ರಾಜ್ಯದವರೇ ಇದ್ದಾರೆ. ಅದರಲ್ಲೂ ನೆರೆ ರಾಜ್ಯ ಕೆರಳಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೋಟೆಲ್ ಉದ್ಯಮ, ಬಟ್ಟೆ ಅಂಗಡಿ, ಕೃಷಿ ಚಟುವಟಿಕೆಗಳಲ್ಲಿ ಅವರ ಪಾಲು ದೊಡ್ಡದಿದೆ. ಇನ್ನು ಆಭರಣ ಅಂಗಡಿಗಳಲ್ಲಿ ರಾಜಸ್ತಾನದವರೇ ಇದ್ದಾರೆ. ಕಟ್ಟಡ ಕಾರ್ಮಿಕ ಕೆಲಸಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳದ ರಾಜ್ಯದವರು ಇದ್ದಾರೆ. ಇವರಲ್ಲಿ ಅದೆಷ್ಟೋ ಮಂದಿ, ವ್ಯಾಪಾರದಲ್ಲಿ ಲಾಭ ಕಂಡುಕೊಂಡು ಇಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಬಹುತೇಕ ಮಂದಿ ಮತಪಟ್ಟಿ ಕೂಡ ಹೊಂದಿದ್ದು, ಇಲ್ಲಿಯೂ ಮತ ಚಲಾಯಿಸುತ್ತಿದ್ದಾರೆ. ಒಂದು ವೇಳೆ ಮತ ಪರಿಷ್ಕರಣೆಯಾದರೆ ಎರಡೆರಡು ಕಡೆ ಗುರುತಿನ ಚೀಟಿ ಹೊಂದಿರುವ ಮತದಾರರನ್ನು, ಮತಪಟ್ಟಿಯಿಂದ ತೆಗೆದು ಹಾಕಲಾಗುತ್ತೆ. ಒಂದು ಕಡೆ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗುತ್ತೆ. ಈ ರೀತಿ ಮಾಡುವುದರಿಂದ ಮತದಾರರ ಸಂಖ್ಯೆ ಏಕಾಏಕಿ ಕಡಿಮೆಯಾಗುತ್ತೆ. ಮತದಾರರ ಸಂಖ್ಯೆ ಕಡಿಮೆಯಾಗುತ್ತಿದಂತೆ ಒಂದು ಪಕ್ಷಕ್ಕೆ ಲಾಭ, ಮತ್ತೊಂದು ಪಕ್ಷಕ್ಕೆ ನಷ್ಟ ಆಗಿಯೇ ಆಗುತ್ತೆ.

ಜೆಡಿಎಸ್ ಗೆ ಲಾಭ ಹೇಗೆ..?
ಕೇರಳದಲ್ಲಿ ಅತಿ ಹೆಚ್ಚು ಮುಸ್ಲಿಂ ಬಾಂಧವರು ಇದ್ದಾರೆ. ಅಲ್ಲಿಂದ ಇಲ್ಲಿಗೆ ಬಂದು ಗುರುತಿನ ಚೀಟಿ ಹೊಂದಿರುವವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು, ಬೇರೆ ಪಕ್ಷಗಳಿಗೆ ಮತ ಹಾಕಲ್ಲ. ಪರಿಸ್ಥಿತಿ ಈಗಿರುವಾಗ ಮತ ಪಟ್ಟಿ ಪರಿಷ್ಕರಣೆಯಾದರೆ ಕೇರಳ ರಾಜ್ಯದವರ ಗುರುತಿನ ಚೀಟಿಗಳು ಡಿಲೀಟ್ ಆಗಲಿದೆ. ಇದರಿಂದ ಕಾಂಗ್ರೆಸ್ ಗೆ ವೋಟ್ ಸಂಖ್ಯೆ ಕಡಿಮೆಯಾಗುತ್ತೆ. ಇದು ಜೆಡಿಎಸ್ ಅಥವಾ ಬಿಜೆಪಿಗೆ ಹೆಚ್ಚು ಲಾಭವಾಗುತ್ತೆ ಎಂದು ವಿಶ್ಲೇಷಣೆ ಮಾಡಲಾಗುತ್ತೆ. ವಲಸಿಗರ ಮತಪಟ್ಟಿ ಡಿಲೀಟ್ ಆದಷ್ಟು ಮತದಾರರ ಸಂಖ್ಯೆ ಕಡಿಮೆಯಾಗಲಿದ್ದು, ಕಾಂಗ್ರೆಸ್ ಗೆ ಹೆಚ್ಚಿನ ಹೊಡೆತ ಬೀಳಲಿದೆ. ಅದೇ ರೀತಿ ಪಶ್ಚಿಮ ಬಂಗಾಳದಿಂದ ಬಂದಿರುವವರು ಕೂಡ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಗಳತ್ತ ಕಣ್ಣು ಹಾಯಿಸಲ್ಲ. ಹೀಗಾಗಿ ಮತಪಟ್ಟಿ ಪರಿಷ್ಕರಣೆಯಿಂದ ಜೆಡಿಎಸ್, ಬಿಜೆಪಿಗೆ ಲಾಭವಾಗಲಿದೆ ಎಂದು ಅರ್ಥೈಸಲಾಗುತ್ತಿದೆ.

