ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಶೀರ್ಷಿಕೆ ನೋಡಿದಾಕ್ಷಣ ದಾಂಪತ್ಯ ಮತ್ತು ಸಮಾನತೆ ಎರಡು ವಿರುದ್ಧ ಪದಗಳಲ್ಲವೆ ಎಂದು ಕೆಲವರಿಗೆ ಅನಿಸಿದರೆ ಅದು ಅವರ ತಪ್ಪೇನಲ್ಲ..
ಎಷ್ಟೋ ಜನ ಗಂಡಸರು ತಾವು ಮದುವೆಯಾಗುವುದೇ ತಾಯಿಯ ನಂತರ ತಮ್ಮನ್ನು ಜೀವನಪರ್ಯಂತ ಪೊರೆವ, ಸಹಿಸುವ, ಮತ್ತು ತಮಗಾಗಿ ಜೀವನವನ್ನೇ ಮುಡುಪಾಗಿಡುವ ತಮ್ಮ ವಂಶೋದ್ಧಾರ ಮಾಡುವ ಉತ್ತಮ ಕೌಟುಂಬಿಕ ಜೀವನಕ್ಕಾಗಿ ತನ್ನದೆಲ್ಲವನ್ನು ಕೊಟ್ಟು ಬರಿದಾಗುವ, ತಮ್ಮೆಲ್ಲ ಮನೋ ದೈಹಿಕ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಹೆಣ್ಣು ಬೇಕೆಂದು.
ಹೆಣ್ಣು ಮಕ್ಕಳನ್ನು ಮದುವೆ ಮಾಡುವುದು ಆಕೆಗೆ ಓರ್ವ ಉತ್ತಮ ಸಂಗಾತಿ ದೊರೆಯಲಿ ತಂದೆ ತಾಯಿಯ ನಂತರ ಆಕೆಯನ್ನು ಸಂರಕ್ಷಿಸಲಿ, ಆಕೆಯ ಎಲ್ಲಾ ರೀತಿಯ ಅಗತ್ಯತೆಗಳನ್ನು ಪೂರೈಸಲಿ ಎಂಬ ಭಾವದಿಂದ ದಾಂಪತ್ಯಕ್ಕೆ ಕಾಲಿಡಿಸುತ್ತಾರೆ.
ಆದರೆ ದಾಂಪತ್ಯ ಎಂಬುದು ಕೇವಲ ಗಂಡು ಹೆಣ್ಣಿನ ನಡುವಣ ಸಮಾಜ ಒಪ್ಪಿದ ಸಂಬಂಧ ಮಾತ್ರವಲ್ಲ.. ದಾಂಪತ್ಯವೆಂಬುದು ಎರಡು ಸಮತೋಲನದಿಂದ ಕೂಡಿದ ಕುಟುಂಬಗಳ ನಡುವಣ ಮೈತ್ರಿ.
ದಾಂಪತ್ಯದಲ್ಲಿ ಯಾರೂ ಮೇಲಲ್ಲ ಕೀಳಲ್ಲ, ಹಿಂದಿನ ಕಾಲದಿಂದಲೂ ದೈಹಿಕವಾಗಿ ಬಲಿಷ್ಠನಾದ ಪುರುಷ ಆಹಾರಕ್ಕಾಗಿ ಅಲೆದಾಡಿ ಕುಟುಂಬದ ಹೊಟ್ಟೆಪಾಡನ್ನು ನೋಡಿಕೊಂಡರೆ ಮಹಿಳೆ ಮನೆಯಲ್ಲಿದ್ದು ಅಡುಗೆ ತಯಾರಿ, ಮಕ್ಕಳ ಲಾಲನೆ-ಪಾಲನೆ, ಕಸ-ಮುಸುರೆ, ಬಟ್ಟೆ ಒಗೆಯುವುದು, ನೀರು ತರುವುದು ಮುಂತಾದ ಮನೆವಾರ್ತೆಯ ಕೆಲಸಗಳನ್ನು ಮಾಡುವುದು ಸಹಜವಾಗಿತ್ತು. ಆದರೆ ಕಳೆದ ಮೂರು ನಾಲ್ಕು ದಶಕಗಳಲ್ಲಿ ಬದಲಾದ ಕಾಲಘಟ್ಟದಲ್ಲಿ ಮಹಿಳೆ ತಾನು ಕೂಡ ಮನೆಯ ನಾಲ್ಕು ಗೋಡೆಯಿಂದ ಹೊರಗೆ ಬಂದು ದುಡಿಯಲಾರಂಭಿಸಿದ್ದಾಳೆ. ಆರ್ಥಿಕವಾಗಿ ಸಬಲಳು ಆಗಿದ್ದಾಳೆ. ಆದರೆ ಸುಖವಾಗಿದ್ದಾಳೆಯೇ!!?? ಎಂದು ಕೇಳಿದರೆ ಉತ್ತರ ಇಲ್ಲ ಎಂಬುದು ಆಗಿದೆ. ಕಾರಣವಿಷ್ಟೇ ಅನಾದಿಕಾಲದಿಂದಲೂ ನಮ್ಮ ಸಂಪ್ರದಾಯಗಳಲ್ಲಿ ಹೆಣ್ಣು ಗಂಡಿಗೆ ತಗ್ಗಿ ನಡೆಯಬೇಕು ಗಂಡಸು ಮನೆಯ ಕೆಲಸಗಳಲ್ಲಿ ಸಹಾಯ ಮಾಡಿದರೆ ಆತನ ಅಹಮಿಕೆಗೆ ಪೆಟ್ಟು ಬೀಳುತ್ತದೆ ಎಂಬ ಭಾವ ನಮ್ಮ ಸೋ ಕಾಲ್ಡ್ ಸಮಾಜದ್ದು. ಒಂದು ಹಂತದವರೆಗೆ ಮೇಲಿನ ಎಲ್ಲವೂ ಸರಿಯಾದರೂ ಮನೆಗೆ ತನ್ನಷ್ಟೇ ಸಂಪಾದನೆಯನ್ನು ಹೊತ್ತು ತರುವ ಹೆಂಡತಿ ತನ್ನಷ್ಟೇ ಸಾಮಾಜಿಕ ವಲಯದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಹೆಂಡತಿ ತನ್ನಷ್ಟೇ ಅಥವಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ (ದೈಹಿಕವಾಗಿ ದುರ್ಬಲಳಲ್ಲವೇ !!) ದಣಿಯಬಹುದು ಎಂಬ ಸತ್ಯವನ್ನು ನಮ್ಮ ಪುರುಷವರ್ಗ ಇನ್ನು ಅರಿತಿಲ್ಲ.

ನಮ್ಮ ಹೆಣ್ಣು ಮಕ್ಕಳೇನು ಕಡಿಮೆಯಲ್ಲ ಬಿಡಿ ಆರಂಭಿಕ ಉತ್ಸಾಹದಲ್ಲಿ ಎಲ್ಲವನ್ನು ಮಾಡಿ ಸಾಧಿಸಿ ತೋರಿಸಬಲ್ಲೆ ಎಂಬ ಹುರುಪಿನಲ್ಲಿ ಅದೇನೋ ಗಾದೆ ಮಾತು ಹೇಳುತ್ತಾರಲ್ಲ “ಹೊಸದರಲ್ಲಿ ಅಗಸ ಗೋಣಿಚೀಲವನ್ನು ಎತ್ತಿ ಎತ್ತಿ ಒಗೆದನಂತೆ” ಹಾಗೆ ಮನೆಯ ಗಂಡಸರನ್ನು ಹಿರಿಯರನ್ನು ತಮ್ಮ ಕೆಲಸಗಳಲ್ಲಿ ಮೂಗು ತೂರಿಸದಂತೆ, ಸಹಾಯ ಮಾಡದಿರುವಂತೆ ಅವರಿಗೆ ಬೇಕು ಬೇಕಾದಂತೆ ಎಲ್ಲವನ್ನು ಮಾಡಿ ಹಾಕುತ್ತಾ, ಕುಳಿತಲ್ಲಿಗೆ ಎಲ್ಲವನ್ನು ತಂದುಕೊಡುತ್ತಾ, ಅವರಿಗೆ ತಾವಿರುವುದೇ ಕೆಲಸವನ್ನು ಮಾಡಿಸಿಕೊಂಡು ಇರಲು ಎಂಬಂತ ಭಾವವನ್ನು ಸೃಷ್ಟಿಸುತ್ತಾರೆ. ‘ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತೆ ಮನೆಯ ಗಂಡಸರ ಸ್ಥಿತಿ’.. ಮೊದಲೇ ಪುರುಷ ಪ್ರಧಾನಿಕೆಯ ಕಟ್ಟುಪಾಡುಗಳನ್ನು ನೋಡುತ್ತಾ ಬೆಳೆದ ಪುರುಷರು ಮೊದಮೊದಲು ಸಂಗಾತಿಯ ಸಹಾಯವನ್ನು ನಿರೀಕ್ಷಿಸಿದರೆ ಬರ ಬರುತ್ತ ಸಂಗಾತಿ ತಮ್ಮ ಎಲ್ಲಾ ಕೆಲಸಗಳನ್ನು ಮಾಡುವ ಅಡಿಯಾಳು ಮತ್ತು ಹಾಗೆ ಮಾಡದಿದ್ದರೆ ಆಕೆಯ ಮೇಲೆ ತಾವು ದರ್ಪ ತೋರಬಹುದು ಎಂಬ ಭಾವವನ್ನು ಬೆಳೆಸಿಕೊಳ್ಳುತ್ತಾರೆ. ಇದು ಕೂಡ ತಪ್ಪೇ ಅಲ್ಲವೇ?
ದಾಂಪತ್ಯ ಎಂಬುದು ತಕ್ಕಡಿಯ ತೂಗುವಿಕೆ ಇದ್ದಂತೆ ಒಂದೆಡೆ ಗಂಡ ಬಾಗಿದರೆ ಇನ್ನೊಂದೆಡೆ ಹೆಂಡತಿ ಬಾಗಲೇಬೇಕು. ಸಮತೋಲನದಲ್ಲಿ ದಾಂಪತ್ಯವನ್ನು ಇಟ್ಟುಕೊಳ್ಳಲು ಬೇಕಾಗಿರುವುದು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮತ್ತು ಸೌಹಾರ್ದತೆ ಇಲ್ಲಿ ಸರ್ವಜ್ಞನ ವಚನ “ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ”.. ಅಂದರೆ ಪತಿ ಪತ್ನಿಯರು ಪರಸ್ಪರ ಇರುವ ಭಿನ್ನಾಭಿಪ್ರಾಯಗಳನ್ನು ಹಂಚಿಕೊಂಡು, ಕಿತ್ತಾಡದೆ ಅವರವರ ವೈಯುಕ್ತಿಕ ನಿಲುವುಗಳನ್ನು ಗೌರವಿಸುವುದು ಹಾಗೂ ಕೊಂಚಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಪ್ರತಿ ಬಾರಿಯೂ ಒಬ್ಬರೇ ಸೋಲುವುದು ಅದೂ ಹೆಣ್ಣು ಮಕ್ಕಳೇ ಯಾಕಾಗಬೇಕು ಎಂಬುದು ಪ್ರಶ್ನೆಯಾದರೆ ನಾವು ಬೆಳೆದು ಬಂದ ವಾತಾವರಣ, ರೂಢಿಗತ ಮೌಲ್ಯಗಳು, ಕುಟುಂಬವನ್ನು ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಹೊತ್ತಿರುವುದು ತಾಳ್ಮೆಯ ಪ್ರತಿರೂಪವಾದ ಹೆಣ್ಣು. ಆರ್ಥಿಕವಾಗಿ ಸಾಮಾಜಿಕವಾಗಿ ಗಂಡು ಕುಟುಂಬವನ್ನು ಪೊರೆಯುತ್ತಾನೆ ಎಂಬುದು ನಿಜವಾದರೂ ವೈಯಕ್ತಿಕವಾಗಿ ಕೌಟುಂಬಿಕ ಹಿತವನ್ನು ಕಾಯುವುದು ಹೆಣ್ಣುಮಕ್ಕಳೇ.
ಮಕ್ಕಳಿಗೆ ಆರೋಗ್ಯ ಸರಿ ಇಲ್ಲದಿರುವಾಗ ಅತ್ತೆ ಮಾವರ ಕಾಳಜಿ ಮನೆಯ ಇನ್ನಿತರೆ ಕೆಲಸ ಕಾರ್ಯಗಳು ಹೆಣ್ಣು ಮಕ್ಕಳ ಜವಾಬ್ದಾರಿ ಎಂಬುದು ಸರ್ವ ವಿಧಿತ ಹಾಗಿದ್ದಾಗ ಯಾವುದೇ ತಪ್ಪುಗಳಿಗೆ ಹೆಣ್ಣು ಮಕ್ಕಳನ್ನೇ ಗುರಿ ಮಾಡುವುದು ಕೂಡ. ಆದರೆ ಎಷ್ಟೋ ಬಾರಿ ಹೆಣ್ಣು ಮಕ್ಕಳು ತಮಗಾಗುವ ದೈಹಿಕ ಮಾನಸಿಕ ತೊಂದರೆಗಳನ್ನು ಮುಚ್ಚಿಡುತ್ತಾ, ಒಮ್ಮೊಮ್ಮೆ ಅನುಭವಿಸುತ್ತಾ ಕುಟುಂಬದ ಒಳಿತಿಗಾಗಿ ದುಡಿಯುತ್ತಾರೆ. ಅಂತಹವರಿಗೆ ಬೇಕಾಗುವುದು ಪ್ರೀತಿಯ ಮಾತು, ಹುಸಿ ಗದರಿಕೆ ಮತ್ತು ಕೆಲಸದಲ್ಲಿ ಸಹಭಾಗಿತ್ವ ಮತ್ತು ಕೊಂಚ ವಿಶ್ರಾಂತಿ.
ಮನೆಯ ಹೊರಗಿನ ತನ್ನ ಕೆಲಸ ಕಾರ್ಯಗಳಿಂದ ದಣಿದು ಬಂದ ಗಂಡಸರು ಮನೆಯನ್ನು ವಿರಾಮಸ್ಥಾನವನ್ನಾಗಿ ಭಾವಿಸುತ್ತಾರೆ. ಆದರೆ ಹೊರಗೆ ದುಡಿಯುವ ಹೆಣ್ಣು ಮಕ್ಕಳದು ಹಾಗಲ್ಲ ಆಕೆ ಮನೆಯಲ್ಲೂ, ಮನೆಯ ಹೊರಗೂ ಕೂಡ ದುಡಿಯಬೇಕು ಅಕಸ್ಮಾತ್ ಮನೆಯ ಕೆಲಸಗಳಲ್ಲಿ ಏನಾದರೂ ವ್ಯತ್ಯಯವಾದರೆ… ನೌಕರಿಯ ಅವಶ್ಯಕತೆ ನಮಗಿಲ್ಲ ಬಿಟ್ಟುಬಿಡು ಎಂಬ ಅನವಶ್ಯಕ ಕಿರಿಕಿರಿ ಮತ್ತು ಒತ್ತಾಸೆ.
ಕಾರಣ ಈ ಎಲ್ಲದರಿಂದ ಮಹಿಳೆ ಮತ್ತು ಪುರುಷರು ಹೊರಬರಬೇಕಾದರೆ ದಂಪತಿಗಳಿಬ್ಬರು ತಮ್ಮ ಅಹಂನಿಂದ ಹೊರಬಂದು ಪರಸ್ಪರರ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಬೇಕು.
*ಇಬ್ಬರೂ ದುಡಿಯುವ ದಂಪತಿಗಳಾದರೆ ಮನೆಯ ಕೆಲಸ ಕಾರ್ಯಗಳಲ್ಲಿ ಪತಿಯು ಹೆಂಡತಿಗೆ ಸಹಾಯ ಮಾಡಬೇಕು. ಮಕ್ಕಳನ್ನು ಶಾಲೆಗೆ ಕಳಿಸುವುದು ಕರೆತರುವುದು ತರಕಾರಿ ತರುವುದು ಹೆಚ್ಚುವುದು ಕೆಲಸದವರಿಗೆ ಪಾತ್ರೆ ಬಟ್ಟೆಗಳನ್ನು ಕೊಡುವುದು ಇಲ್ಲವೇ ವಾಷಿಂಗ್ ಮಷೀನ್ ನ ಬಳಸುವುದು… ಹೀಗೆ ಎಲ್ಲವನ್ನು ಗಂಡಸರು ಕಲಿತಿರಬೇಕು.
*ಪತ್ನಿಯ ಅನುಪಸ್ಥಿತಿಯಲ್ಲಿ ಕೆಲವು ಸಣ್ಣಪುಟ್ಟ ಅಡುಗೆ ತಿಂಡಿಗಳನ್ನು ಮಾಡುವುದು
*ಮನೆಯ ನಿರ್ವಹಣೆಯನ್ನು ಪತಿಯು ಕಲಿತಿರಬೇಕು.
*ಪತಿ ಪತಿಯರು ಪರಸ್ಪರ ಸಮಾಲೋಚಿಸುತ್ತ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು.
*ಪರಸ್ಪರರ ಅಗತ್ಯತೆಗಳಿಗೆ ಸ್ಪಂದಿಸಬೇಕು.
ಕೊನೆಯದಾಗಿ ಒಂದು ಮಾತು”ಋಣಾನುಬಂಧ ರೂಪೇಣ ಪಶು ಪತ್ನಿಸುತ ಆಲಯ”ಎಂಬ ಮಾತಿನಂತೆ ನಮಗೆ ಪತ್ನಿಯು ದೈವಾನುಗ್ರಹ ಮತ್ತು ಋಣಾನುಬಂಧವಿದ್ದರೆ ಮಾತ್ರ ಸಿಗುತ್ತಾಳೆ… ತಾನು ಹುಟ್ಟಿದ ಮನೆಯನ್ನು ಹೆತ್ತವರನ್ನು ಬಂದು ಬಾಂಧವರನ್ನು ಬಿಟ್ಟು ಮತ್ತೊಂದು ಮನೆಯ ದೀಪವಾಗಿ ಬರುವ ಹೆಣ್ಣು ಮಗಳು ನಿಮ್ಮ ಮನೆಯನ್ನು ಸೇರಿದಾಗ ಆಕೆಯನ್ನು ತವರು ಮನೆಗೆ ಸಲ್ಲದ ಗಂಡನ ಮನೆ ಅವಳದೆಂದು ಒಪ್ಪಿಕೊಳ್ಳದ ತ್ರಿಶಂಕು ಸ್ಥಿತಿಗೆ ತಂದು ನಿಲ್ಲಿಸದೆ ಗೌರವದಿಂದ ನಡೆಸಿಕೊಳ್ಳಬೇಕು. ಕುಟುಂಬದ ಸಾಮರಸ್ಯ ಇರುವುದು ದಂಪತಿಗಳಲ್ಲಿ ಎಂದಾಗ ಪರಸ್ಪರ ಕೈಹಿಡಿದು ದಾಂಪತ್ಯದ ಜೋಡೆತ್ತಿನ ಪಯಣವನ್ನು ಮುಂದುವರಿಸಬೇಕೆ ಹೊರತು ಹಿಂದು ಮುಂದಾಗಬಾರದು. ಪರಸ್ಪರ ಭಾವನೆಗಳನ್ನು, ವ್ಯಕ್ತಿತ್ವಗಳನ್ನು ಆತ್ಮಾಭಿಮಾನವನ್ನು ಗೌರವಿಸುವ ಸಮಾನತೆಯ ದಾಂಪತ್ಯ ಜೀವನ ಎಲ್ಲರಿಗೂ ಸಿಗಲಿ ಎಂಬ ಹಾರೈಕೆಯೊಂದಿಗೆ..


