ಜ.೯ ರಂದು ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ | ಸಿಎಂ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರಕ್ಕೆ ಇದೇ ದಿ.೯ ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸಿ ರಾಣಿ ಚೆನ್ಮಮ್ಮ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಈ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು,
ಅನೇಕ ದಶಕಗಳ ಕಾಲ ವೀರ ರಾಣಿ ಕಿತ್ತೂರ ಚೆನ್ನಮ್ಮ ಅವರ ಪ್ರತಿಮೆ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇತ್ತು, ಶಂಕರಗೌಡ ಪಾಟೀಲ ಸವನಹಳ್ಳಿ ಸೇರಿದಂತೆ ಅನೇಕ ಸಮಾಜ ಮುಖಂಡರು ಈ ಬಗ್ಗೆ ಮನವಿ ನೀಡುತ್ತಲೇ ಇದ್ದರು, ಕೇಂದ್ರ ಬಸ್ ನಿಲ್ದಾಣದ ಎದುರು ವೃತ್ತ ನಿರ್ಮಾಣ ಸಾಧ್ಯವಾಗದ ಕಾರಣ ಕೇಂದ್ರ ಬಸ್ ನಿಲ್ದಾಣದ ಎದುರು ಭವ್ಯವಾದ ಅಶ್ವಾರೂಢ ರಾಣಿ ಚೆನ್ಮಮ್ಮ ಪ್ರತಿಮೆ ಸ್ಥಾಪಿಸಲಾಗಿದೆ, ಕೇಂದ್ರ ಬಸ್ ನಿಲ್ದಾಣಕ್ಕೂ ಸಹ ರಾಣಿ ಚೆನ್ನಮ್ಮ ಅವರ ಹೆಸರು ಇರಿಸಿ ಸರ್ಕಾರ ಆದೇಶ ಹೊರಡಿಸಿದೆ, ಈ ನಾಮಫಲಕವನ್ನು ಸಹ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದಾರೆ. ಇಂಧನ, ಸಮಾಜ ಕಲ್ಯಾಣ, ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಸಹ ಮುಖ್ಯಮಂತ್ರಿಗಳು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ವೆಲೋಡ್ರೋಂ ಲೋಕಾರ್ಪಣೆ ಸಹ ದಿ.೯ ರಂದು ಮಾಡಲಿದ್ದು, ಅಲ್ಲಿ ವೇದಿಕೆ ಕಾರ್ಯಕ್ರಮ ಇಲ್ಲ, ಸಾಂಕೇತಿಕವಾಗಿ ಅಲ್ಲಿ ಮುಖ್ಯಮಂತ್ರಿಗಳು ಈ ವೆಲೋಡ್ರೋಂ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಸುಧಾಕರ, ಕೆ.ಜೆ. ಜಾರ್ಜ್, ಶಿವರಾಜ ತಂಗಡಗಿ ಸೇರಿದಂತೆ ಅನೇಕ ಸಚಿವರು ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ವಿಮಾನ ನಿಲ್ದಾಣ ಕಾರ್ಯ ಸಹ ಸಂಪೂರ್ಣಗೊಂಡಿದೆ, ಅದಕ್ಕೆ ಮಹಾತ್ಮಾ ಬಸವೇಶ್ವರರ ಹೆಸರು, ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ಹಾಗೂ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹಾಗೂ ಅಕ್ಕಮಹಾದೇವಿ ಅವರ ಹೆಸರನ್ನು ಮಹಿಳಾ ವಿವಿಗೆ ಇರಿಸಲಾಗಿದ್ದು, ಇಬ್ರಾಹಿಂ ಆದಿಲ್‌ಷಾಹಿ ಅವರ ಹೆಸರು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿಯೂ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ವೀರ ರಾಣಿ ಕಿತ್ತೂರ ಚೆನ್ನಮ್ಮ ಇಡೀ ದೇಶದ ಆಸ್ತಿ, ಕೂಡಲಸಂಗಮ ಪಂಚಮಸಾಲಿ ಜಗದ್ಗುರುಗಳು, ಹರಿಹರ ಪೀಠದ ಜಗದ್ಗುರುಗಳು ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ, ಈ ಕಾರ್ಯಕ್ರಮಕ್ಕೆ ಯಾವ ಭಿನ್ನಾಭಿಪ್ರಾಯವಾಗಲಿ, ಅಪಸ್ವರವಾಗಲಿ ಇಲ್ಲವೇ ಇಲ್ಲ, ನಗರ ಶಾಸಕ ಯತ್ನಾಳ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಗೊಳ್ಳಿ ರಾಯಣ್ಣ ಭವ್ಯ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡುವ ನಿಟ್ಟಿನಲ್ಲಿ ಸಮಾಜ ಬಾಂಧವರು ಮನವಿ ಮಾಡಿಕೊಂಡಿದ್ದಾರೆ, ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ದಾಖಲೆ ಬರೆದ ಸಿದ್ಧರಾಮಯ್ಯ ಅವರಿಗೆ ವಿಶೇಷ ಸನ್ಮಾನ
ಗ್ರಾಮೀಣ ಭಾಗದಿಂದ ಬಂದು ಇಂದು ಎಲ್ಲ ವರ್ಗಗಳ ಜನತೆಯ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ ಈಗ ಧೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೊಸ ದಾಖಲೆಯನ್ನು ಬರೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಮಸ್ತ ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಹೃದಯಸ್ಪರ್ಶಿಯಾಗಿ ಅಭಿನಂದಿಸುವ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಪ್ರಕಟಿಸಿದರು.
ದೇಶ ರಕ್ಷಣೆಯ ವಿಷಯ ಬಂದಾಗ ಇಂದಿರಾ ಗಾಂಧೀ ಅವರನ್ನು ಬಂಗಾರದಿಂದ ತೂಗಿದ ಜಿಲ್ಲೆ ನಮ್ಮದು, ಹೀಗಾಗಿ ಈ ಭಾಗಕ್ಕೆ ಕೊಡುಗೆ ನೀಡಿದ ಸಿದ್ಧರಾಮಯ್ಯ ಅವರನ್ನು ಸಹ ಅಭೂತಪೂರ್ವವಾಗಿ ಸನ್ಮಾನಿಸಲಾಗುವುದು, ಅದು ಯಾವ ರೀತಿ ಎನ್ನುವುದು ಸಮಾರಂಭದಲ್ಲಿಯೇ ಗೊತ್ತಾಗಲಿದೆ ಎಂದರು.
ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆ
ವಿಜಯಪುರ ಜಿಲ್ಲೆ ಸೈಕ್ಲಿಂಗ್ ಕಾಶಿ ಎಂದೇ ಹೆಸರಾಗಿದೆ, ಹೀಗಾಗಿ ಈ ಚಟುವಟಿಕೆಗಳಿಗೆ ಇನ್ನಷ್ಟೂ ಬಲ ನೀಡುವ ದೃಷ್ಟಿಯಿಂದ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮಹತ್ವದ ಚರ್ಚೆ ನಡೆದಿದೆ, ವಿವಿಧ ಕಾರ್ಪೋರೇಟ್ ಕಂಪನಿಗಳ ಸಹಯೋಗದೊಂದಿಗೆ ಈ ಅಕಾಡೆಮಿ ಸ್ಥಾಪಿಸಿ ಸೈಕ್ಲಿಂಗ್‌ಗೆ ಅಮೋಘ ಸೇವೆ ಸಲ್ಲಿಸಿದವರ ಹೆಸರು ಇರಿಸಲಾಗುವುದು ಎಂದು ಸಚಿವ ಪಾಟೀಲ ಇದೇ ವೇಳೆ ಪ್ರಕಟಿಸಿದರು.

“ವಿಜಯಪುರ ವಿಮಾನ ನಿಲ್ದಾಣ ಬಾರಾಕಮಾನ್ ಆಗುತ್ತಿತ್ತು. ಆದರೆ ಅದಕ್ಕೆ ವಿಶೇಷ ಅನುದಾನ ನೀಡಿ ಅದನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ, ಸಕಲ ಕಾರ್ಯಗಳು ಪೂರ್ಣಗೊಂಡಿವೆ, ಆದರೆ ಪರಿಸರ ನಿರಪೇಕ್ಷಣಾ ಪತ್ರ ದೊರಕಿಲ್ಲ, ಈ ವಿಷಯ ನ್ಯಾಯಾಲಯದಲ್ಲಿದೆ, ಈ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ, ವಿಶೇಷ ಅಸಕ್ತಿ ವಹಿಸದೇ ಹೋದರೆ ಅದು ಬಾರಾಕಮಾನ್ ಆಗುತ್ತಿತ್ತು. ಎಲ್ಲವೂ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಗಿದೆ.”
– ಡಾ. ಎಂ.ಬಿ.ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು

