ಉದಯರಶ್ಮಿ ದಿನಪತ್ರಿಕೆ
ಸಿಂದಗಿ:ಸಿದ್ದರಾಮಯ್ಯ ಅವರು ರಾಜ್ಯದ ಅತ್ಯಂತ ಯಶಸ್ವಿ ರಾಜಕಾರಣಿಗಳಲ್ಲಿ ಒಬ್ಬರು. ಅವರು ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ಕನಕದಾಸ ವೃತ್ತದಲ್ಲಿ ಮಾಜಿ ಸಿಎಂ ದಿ. ಡಿ.ದೇವರಾಜು ಅರಸು ಅವರ ಅಧಿಕಾರ ಅವಧಿಯ ದಾಖಲೆಯನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸೃಷ್ಠಿಸಿದ ರಾಜ್ಯದ ಸಿ.ಎಂ.ಸಿದ್ದರಾಮಯ್ಯನವರ ಸಂಭ್ರಮಾಚರಣೆ ನಾಟಿ ಕೋಳಿ ಬಾಡೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಡಾ.ಅಂಬೇಡ್ಕರ ಹಾಗೂ ಬಸವಣ್ಣನವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಮೂಲಕ ಜನಮಾನಸದಲ್ಲಿ ಹೆಸರಾಗಿದ್ದಾರೆ. ಅಲ್ಪ ಸಂಖ್ಯಾತರ, ಬಡವರ, ದೀನ ದಲಿತರ ಮತ್ತು ಮಹಿಳೆಯರ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮುಖೇನ ಅವರ ಹಿತ ಕಾಪಾಡಿದ್ದಾರೆ ಎಂದರು.
ಈ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭ ವರ್ಷ ೨೪೦ ದಿನಗಳ ದಾಖಲೆಯ ಅಧಿಕಾರ ಅವಧಿ ಪೂರೈಸಿದ ಹಿನ್ನಲೆ ಸಿಂದಗಿ ಪಟ್ಟಣದ ಹಾಲುಮತ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ೧೦೦ ನಾಟಿ ಕೋಳಿ ಬಾಡೂಟ ಹಂಚಿ, ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಗೂ ಹಾಲುಮತ ಸಮಾಜ ಬಾಂಧವರು ಹಾಲೆರೆದು, ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಈ ವೇಳೆ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬುಳ್ಳಾ, ಮುಖಂಡರಾದ ಶಿವು ಗಣಿಹಾರ, ಶರಣಪ್ಪ ಮಲಗೊಂಡ, ಭೂತಾಳಿ ಗಣಿಹಾರ, ತಿಪ್ಪಣ್ಣ ಬೀರಗೊಂಡ, ಸಂತೋಷ ಪೂಜಾರಿ, ನಿಂಗಪ್ಪ ಬಿಸನಾಳ, ಸಂತೋಷ ಗುಡ್ಯಾಳ, ಸಿದ್ದು ಬೀರಗೊಂಡ, ಮಾಳು ಪೂಜಾರಿ, ಲಕ್ಕಪ್ಪ ಜೇವರ್ಗಿ, ನಿಂಗಪ್ಪ ರಾಂಪೂರ, ಭಾಗಣ್ಣ ಬೀರಗೊಂಡ, ಲಕ್ಕಪ್ಪ ಬಿಸನಾಳ, ಪಿಂಟೂ ಹೊಸಮನಿ ಸೇರಿದಂತೆ ಸಮಾಜ ಬಾಂಧವರು ಇದ್ದರು.

