ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಬಿಜೆಪಿಯಲ್ಲಿ ಹಣ ಇದ್ದವರಿಗೆ ಮಣೆ ಹಾಕಲಾಗುತ್ತಿದೆ, ಹಣ ಪಡೆದು ಪದಾಧಿಕಾರ ನೀಡಲಾಗುತ್ತಿದೆ ಎಂಬ ಯುವ ಮುಖಂಡ ಶಂಕರ ಹೂಗಾರ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಸಂಪೂರ್ಣ ಪಾರದರ್ಶಕತೆಯಿಂದ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷ ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಪಕ್ಷ, ಇಲ್ಲಿರುವ ಎಲ್ಲ ಕಾರ್ಯಕರ್ತರು ಸಮರ್ಪಣಾ ಮನೋಭಾವ, ದೇಶಾಭಿಮಾನದ ಗುಣಗಳಿಂದ ದುಡಿಯುವವರು, ನಿಸ್ವಾರ್ಥತೆಯಿಂದ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡವರು, ಹೀಗಾಗಿ ಯಾರೂ ಸಹ ಪದಾಧಿಕಾರಿಯಾಗಲು ಹಣ ಕೊಡುವ ಪ್ರಶ್ನೆಯೇ ಬರುವುದಿಲ್ಲ, ಹಣ ಕೇಳುವ ಪ್ರಮೇಯವೇ ಉದ್ಭವಿಸುವುದಿಲ್ಲ, ವಿನಾಕಾರಣ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ, ಕೋರ್ ಕಮೀಟಿ ರಚನೆಯೂ ಆಗಿಲ್ಲ, ಈ ಬಗ್ಗೆ ಸಭೆಯೂ ನಡೆದಿಲ್ಲ. ಆದರೂ ಏನೇನೋ ಊಹಿಸಿಕೊಂಡು ಹೇಳಿಕೆ ನೀಡಿದರೆ ಹೇಗೆ? ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲದ ನಿಮಗೆ ನಮ್ಮ ಪಕ್ಷದ ಬಗ್ಗೆ ಅಗೌರವ ತೋರುವ ಹಾಗೂ ಆಧಾರ ರಹಿತ ಆಪಾದನೆ ಮಾಡುವ ಯಾವ ನೈತಿಕ ಹಕ್ಕು ಇಲ್ಲ, ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕತೆಯಿಂದ ಮುಖಂಡರ ಸಲಹೆ-ಸೂಚನೆ ಆಧರಿಸಿಯೇ ಮಾಡಲಾಗುತ್ತದೆ, ಹೀಗಾಗಿ ಹೂಗಾರ ಅವರ ಆರೋಪದಲ್ಲಿ ಯಾವ ಹುರುಳಿಲ್ಲ, ಇನ್ಮುಂದೆ ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಿ, ಆಧಾರ ರಹಿತ ಆಪಾದನೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

