ವಿಜಯಪುರದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೀರ ರಾಣಿ ಚೆನ್ನಮ್ಮ ಅವರ ಮೂರ್ತಿ ಪ್ರತಿಷ್ಠಾಪನೆಗೆ ಯಾವ ವಿರೋಧವೂ ಇಲ್ಲ, ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸಮಾಜದ ಗಣ್ಯರು, ಸ್ವಾಮೀಜಿಗಳು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಪಂಚಮಸಾಲಿ ಮುಖಂಡ ಉಮೇಶ ಕೋಳಕೂರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ರಾಣಿ ಚೆನ್ನಮ್ಮ ಸಾಹಸ, ದೇಶಾಭಿಮಾನದ ಪ್ರತೀಕ, ಅವರ ಆದರ್ಶಗಳು ಎಲ್ಲರಿಗೂ ಮಾದರಿ, ಅವರ ಪ್ರತಿಮೆ ವಿಜಯಪುರದಲ್ಲಿ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ, ದಿ.೯ ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೂರ್ತಿ ಅನಾವರಣ ಮಾಡಲಿದ್ದಾರೆ, ಅಂದು ಕಿತ್ತೂರ ರಾಣಿ ಚೆನ್ನಮ್ಮ ಅವರ ಸಾಹಸಗಾಥೆಯನ್ನು ವಿವರಿಸುವ ಪ್ರತಿಬಿಂಬವಾಗಿ ವೀರಜ್ಯೋತಿ ಮೆರವಣಿಗೆ ನಡೆಯಲಿದ್ದು, ಅಂದು ಜಂಬಗಿಯಲ್ಲಿರುವ ರಾಣಿ ಚೆನ್ನಮ್ಮ ಅವರ ವಂಶಜರಾದ ಜಂಬಗಿಯ ದೇಶಮುಖ ಅವರ ನಿವಾಸದಿಂದ ಬೆಳಿಗ್ಗೆ ೬ ರಿಂದ ಈ ಜ್ಯೋತಿಯ ಮೆರವಣಿಗೆ ಆರಂಭವಾಗಿ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತಲುಪಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀ ಸಿದ್ದೇಶ್ವರ ದೇವಾಲಯದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಈ ವೀರ ಜ್ಯೋತಿ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಲಿದ್ದು, ಈ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಾಣಿ ಚೆನ್ನಮ್ಮ ವೃತ್ತ (ಕೇಂದ್ರ ಬಸ್ ನಿಲ್ದಾಣ)ಕ್ಕೆ ತಲುಪಿ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಕೇಂದ್ರ ಬಸ್ ನಿಲ್ದಾಣದ ಎದುರು ಸುಂದರ ಹಾಗೂ ಭವ್ಯವಾದ ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಸಚಿವರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಒಟ್ಟು ೩೨ ಎತ್ತರದ ಈ ಭವ್ಯ ಪ್ರತಿಮೆ ದಿ.೯ ರಂದು ಅನಾವರಣವಾಗಲಿದೆ, ಈ ಕಾರ್ಯಕ್ರಮದ ಅಂಗವಾಗಿ ೧೦೦ ಫೂಟ್ ಎತ್ತರದ ೨೪ ಗಂಟೆಗಳ ಕಾಲ ತ್ರಿವರ್ಣ ಧ್ವಜ ಹಾರಾಡುವ ನಿಟ್ಟಿನಲ್ಲಿ ಬೃಹತ್ ಧ್ವಜ ಸ್ತಂಭ ನಿರ್ಮಿಸಲಾಗಿದ್ದು, ಈ ಧ್ವಜಸ್ತಂಭದ ಅನಾವರಣ ಸಹ ನಡೆಯಲಿದೆ ಎಂದು ಕೋಳಕೂರ ತಿಳಿಸಿದರು.
ಅಪೂರ್ವ ಇತಿಹಾಸವುಳ್ಳ ಹಾಗೂ ಅನೇಕ ಕಲಾವಿದರಿಗೆ ಕಲಾ ವಿದ್ವತ್ತು ಪ್ರದರ್ಶನಕ್ಕೆ ವೇದಿಕೆಯಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ಸಹ ಅದೇ ವೇಳೆ ನಡೆಯಲಿದೆ ಎಂದರು.
ಪ್ರಮುಖರಾದ ಎಸ್.ಎಸ್.ಆಲೂರ, ಡಿ.ಎಸ್. ಬಿರಾದಾರ, ಜಿ.ಜಿ.ಸಲಗರ, ಪುಟ್ಟು ಸಾವಳಗೊಳ, ಆರ್.ಜಿ.ಯರನಾಳ, ರವಿ ತೊರವಿ, ರಾಜುಗೌಡ ಪಾಟೀಲ, ವಿದ್ಯಾರಾಣಿ ತುಂಗಳ, ವಿಜಯಕುಮಾರ ಮುಳಗೊಂಡ ಮೊದಲಾದವರು ಉಪಸ್ಥಿತರಿದ್ದರು.

