ವಿಜಯಪುರದಲ್ಲಿ ಎಸ್‌ಯುಸಿಐ ಪಕ್ಷದ ರಾಜ್ಯ ಸೆಕ್ರೆಟ್ರಿಯರೇಟ್ ಸದಸ್ಯ ಡಾ. ಟಿ.ಎಸ್.ಸುನೀತಕುಮಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರರ ಮೇಲೆ ಕೊಲೆ ಯತ್ನದಂತಹ ಸುಳ್ಳು ಪ್ರಕರಣ ದಾಖಲಿಸಿರುವುದು ಖೇದಕರ, ಹೋರಾಟಗಾರರನ್ನು ಈ ರೀತಿ ಬೆದರಿಸಿ ದಮನಗೊಳಿಸುವ ನೀತಿ ಸರ್ಕಾರ ಪ್ರದರ್ಶಿಸುತ್ತಿದೆ, ಕೂಡಲೇ ಎಲ್ಲ ಬಂಧಿತ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಉಳಿದೆಲ್ಲ ೨೭ ಜನ ಆರೋಪಿಗಳ ವಿರುದ್ಧ ದಾಖಲಾದ ಮೊಕದ್ದಮೆಗಳನ್ನು ವಾಪಾಸ್ಸು ಪಡೆಯಬೇಕು ಎಂದು ಎಸ್‌ಯುಸಿಐ ಸೆಕ್ರೆಟ್ರಿಯರೇಟ್ ಸದಸ್ಯ ಡಾ.ಟಿ.ಎಸ್. ಸುನೀತಕುಮಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ನ್ಯಾಯೋಚಿತ ಆಗ್ರಹ, ಪೂರಕವಾದ ಜಾಗೆ, ಪೂರಕವಾದ ಸೌಲಭ್ಯ ಇದ್ದರೂ ನಮ್ಮ ಜಿಲ್ಲೆಗೆ ಏಕೆ ಕೊಡುತ್ತಿಲ್ಲ ಎಂಬುದು ನ್ಯಾಯೋಚಿತವಾದ ಕೂಗು, ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಲಾಗುತ್ತಿದೆ, ಆದರೆ ನಮ್ಮ ಜಿಲ್ಲೆಯ ವಿಷಯವಾಗಿ ವಿಳಂಬವೇಕೆ ಎಂದರು.
ಅನೇಕ ಹೋರಟಗಾರರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ, ಕೊಲೆಯತ್ನದಂತಹ ಸುಳ್ಳು ಆರೋಪ ಹೊರೆಸಿ ದೂರು ದಾಖಲಿಸಿರುವುದು ಸರಿಯಲ್ಲ, ಕೂಡಲೇ ಈ ಎಲ್ಲ ಹೋರಾಟಗಾರರ ಮೇಲೆ ಕೇಸು ವಾಪಾಸ್ಸು ಪಡೆಯಬೇಕು, ಈ ವಿಷಯವಾಗಿ ನಾವು ಸಹ ಕಾನೂನಾತ್ಮಕ ಹೋರಾಟಕ್ಕೂ ನಾವು ಸಿದ್ಧ, ಸುಳ್ಳು ಕೇಸ ದಾಖಲಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ನಿರಂತರ, ಆ ಹೋರಾಟ ನಿಲ್ಲಲ್ಲ, ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಲ್ಲಿ ಚರ್ಚೆ ಮಾಡಿ ಹೋರಾಟ ಸ್ವರೂಪ ಚರ್ಚಿಸಲಾಗುವುದು, ಎಲ್ಲ ಸಂಘ-ಸಂಸ್ಥೆಗಳ ಸಲಹೆ ಆಧರಿಸಿ ಹೋರಾಟ ಮುಂದುವರೆಸಲಾಗುವುದು, ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಅಥವಾ ಸಚಿವ ಸಂಪುಟದಲ್ಲಿ ತೀರ್ಮಾನವಾಗುವವರೆಗೂ ನಾವು ಹೋರಾಟ ನಿಲ್ಲಿಸಲ್ಲ, ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಪ್ರಯತ್ನ ಮಾಡಲಾಗುವುದು, ಈ ಹಿಂದೆ ಮುಖ್ಯಮಂತ್ರಿಗಳು ಭೇಟಿ ಮಾಡಿದ ವೇಳೆ ಅವರು ಅವಸರದಲ್ಲಿದ್ದರು, ಈಗ ಪುನ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೋರಾಟಗಾರರ ಬಿಡುಗಡೆ ಹಾಗೂ ಮೆಡಿಕಲ್ ಕಾಲೇಜ್ ವಿಷಯವಾಗಿ ಮಾತನಾಡಲು ಸಮಯ ಕೋರುತ್ತೇವೆ ಎಂದರು.
ಪಕ್ಷದ ಹಿರಿಯರಾದ ಭಿ. ಭಗವಾನ ರೆಡ್ಡಿ ಅವರನ್ನು ಬಂಧಿಸಲಾಗಿದೆ, ನಮ್ಮ ಪಕ್ಷದ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ, ಈ ಹೋರಾಟವನ್ನು ನಾವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ವಿಸ್ತರಿಸಿದ್ದು, ಕಲಬುರ್ಗಿ, ಯಾದಗೀರ, ಬೀದರ ಸೇರಿದಂತೆ ಹಲವಾರು ಕಡೆಗಳಲ್ಲಿ ಪಿಪಿಪಿ ವಿರೋಧಿ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಎಸ್‌ಯುಸಿಐ ಪ್ರಮುಖರಾದ ಸಿದ್ರಾಮಯ್ಯ ಹಿರೇಮಠ, ಶಿವರಂಜಿನಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
