ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ವಿಷಯವಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದು, ಅವರನ್ನು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ದೂರ ಸರಿಯಬೇಕು, ಜನಸಾಮನ್ಯರ ಹಿತ ಕಾಪಾಡುವ ಮಂತ್ರಿಯನ್ನು ಈ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿಸಿ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಗಂಭೀರವಾಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸಮವಸ್ತ್ರವಿಲ್ಲದೇ ಅಲ್ಲೇಕೆ ಹೋದರು? ಇದರ ಹಿಂದೆ ಯಾರ ಕೈವಾಡವಿದೆ, ಈ ಬಗ್ಗೆ ತನಿಖೆ ನಡೆಸಲು ಐಜಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕರೆ ನೀಡಿದರು. ಜನಪರ ಹೋರಾಟಗಾರನ್ನು ಬಂಧಿಸುವುದು ಎಷ್ಟು ಸರಿ? ಒಂದು ರೀತಿ ಹೋರಾಟ ಹಕ್ಕು ನೀಡಿದ ಸಂವಿಧಾನವನ್ನೇ ಜೈಲಿಗೆ ಹಾಕಿದಂತಾಗಿದೆ ಎಂದರು.
ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಹಿಡನ್ ಅಜೆಂಡಾ ಇರಿಸಿಕೊಂಡೇ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಸರ್ಕಾರದ ಅಣತಿಯೊಂದಿಗೆ ಹತ್ತಿಕ್ಕುವ ಪ್ರಯತ್ನ ಮಾಡಿದೆ, ಪೊಲೀಸರು ಅಲ್ಲಿ ಕಲರ್ ಡ್ರೆಸ್‌ನಲ್ಲಿ ಬರುವ ಔಚಿತ್ಯವೇನಿತ್ತು? ಪ್ರತಿಭಟನಾಕಾರರಿಗೆ ಪ್ರಚೋದನೆ ಮೂಡಿಸಿ ಗಲಭೆ ಎಬ್ಬಿಸುವ ನಿಟ್ಟಿನಲ್ಲಿ ಕೆಲವು ಪೊಲೀಸರೇ ಪ್ರಯತ್ನಿಸಿದರು ಎಂದು ಸೂಳಿಭಾವಿ ಹೇಳಿದರು.
ಈ ವಿಷಯದಲ್ಲಿ ಸಚಿವ ಶಿವಾನಂದ ಪಾಟೀಲರಿರು ಸೇರಿದಂತೆ ಎಲ್ಲರಿಗೂ ಈ ವಿಷಯದಲ್ಲಿ ಜವಾಬ್ದರಿ ಇದೆ, ಸಚಿವ ಶಿವಾನಂದ ಪಾಟೀಲರು ಹಾವೇರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸಿ ಹೆಸರು ಗಳಿಸಿದ್ದಾರೆ, ಇದೇ ರೀತಿ ಹೆಸರು ಗಳಿಸುವ ಚಿಂತನೆ ಸಚಿವ ಡಾ.ಎಂ.ಬಿ. ಪಾಟೀಲರಲ್ಲಿ ಏಕೆ ಬರುತ್ತಿಲ್ಲ ಎಂದರು.
ನಮಗೆ ಎಂ.ಬಿ. ಪಾಟೀಲರ ವಿರೋಧವಿಲ್ಲ, ಹೋರಾಟಗಾರರ, ಜನರ ಟಾರ್ಗೆಟ್ ಆಗಬಾರದು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಹೋರಾಟಗಳನ್ನು ಸಹಿಸಿಕೊಂಡಿಯೇ ಇಲ್ಲ, ರೈತ ವಿರೋಧಿ ಕಾಯ್ದೆ ಹಿಂದಕ್ಕೆ ಪಡೆಯಲು ರೈತರು ವರ್ಷಗಟ್ಟಲೇ ಹೋರಾಟವನ್ನು ದಮನಗೊಳಿಸಲು ಕೇಂದ್ರ ಸರ್ಕಾರ ಅನೇಕ ಷಡ್ಯಂತ್ರ ರೂಪಿಸಿತು, ಇದೇ ಮಾದರಿಯಲ್ಲಿ ಈಗ ರಾಜ್ಯ ಸರ್ಕಾರ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.
ದಲಿತರು ಜೈಲಿನಲ್ಲಿರಬೇಕು, ಪಾಟೀಲರು ಆಡಳಿತದಲ್ಲಿರಬೇಕೆ? ಹಿರಿಯ ದಲಿತ ಹೋರಾಟಗಾರ, ತನ್ನ ಜೀವನವನ್ನೇ ಚಳವಳಿ, ಜನಪರ ಹೋರಾಟಕ್ಕೆ ಮೀಸಲಿರಿಸಿದ ಹಿರಿಯ ಪತ್ರಕರ್ತ ಹೊಸಮನಿ ಅವರನ್ನು ಜೈಲಿಗೆ ಕಳುಹಿಸಿರುವುದು ಎಷ್ಟು ಸರಿ? ಎಂದರು.
ಹೋರಾಟ ಸ್ಥಳದಲ್ಲಿದ್ದ ಮಧ್ಯರಾತ್ರಿ ಟೆಂಟ್ ತೆರವುಗೊಳಿಸಿರುವುದು ಸರ್ವಾಧಿಕಾರ ಧೋರಣೆಗೆ ಸ್ಪಷ್ಟ ಸಾಕ್ಷಿ, ಇದು ಆಡಳಿತದ ಅಹಂಕಾರ ಹಾಗೂ ದುರ್ವತನೆಯನ್ನು ತೋರಿದೆ, ಈ ಎಲ್ಲವುಗಳಿಂದ ಹೋರಾಟ ದಮನಿಸುವ ಪೂರ್ವನಿಯೋಜಿತ ಕೃತ್ಯ ಎಂದು ದೂರಿದರು.
ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣವಾದರೆ ಉಳ್ಳವರಿಗೆ ಮಾತ್ರ ಅನುಕೂಲ, ಹೀಗಾಗಿಯೇ ಇದನ್ನು ವಿರೋಧಿಸಿ ಪ್ರಬಲವಾಗಿ ಹಾಗೂ ಶಾಂತಿಯುತವಾಗಿ ಹೋರಾಟ ನಡೆದಿತ್ತು. ಚಳವಳಿಗಳು ಅನಿವಾರ್ಯವಾಗಿ ಬೇರೆ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದರು ಎಂದರು.
ಹೋರಾಟಗಾರರನ್ನು ಜೈಲಿಗೆ ಹಾಕಿದರೂ ಅಲ್ಲಿಯೂ ಹೋರಾಟ ನಡೆಸಲಿದ್ದಾರೆ, ಇದನ್ನು ದಮನಗೊಳಿಸುವ ಪ್ರಯತ್ನದಿಂದ ಹೋರಾಟ ನಿಲ್ಲದು, ಮುಖ್ಯಮಂತ್ರಿಗಳು ದಿ.೯ ರಂದು ಜಿಲ್ಲೆಗೆ ಆಗಮಿಸಲಿದ್ದು, ಅಲ್ಲಿ ಸ್ಪಷ್ಟವಾದ ಸಂದೇಶವನ್ನು ರವಾನಿಸಬೇಕು, ಒಂದು ವರ್ಷ ಬೇಕಾದರೂ ತೆಗೆದುಕೊಳ್ಳಲಿ, ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿಯೇ ಹೋಗಬೇಕು ಎಂದು ಒತ್ತಾಯಿಸಿದರು.
ಬಂಧಿನಕ್ಕೊಳಗಾಗಿರುವ ಎಲ್ಲ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು, ಎಫ್‌ಐಆರ್ ನೋಡಿದಾಗ ಅಲ್ಲಿ ಸುಳ್ಳು ತಾಂಡವವಾಡುತ್ತಿದೆ, ಪೊಲೀಸರು ಸುಳ್ಳು ಎಫ್‌ಐಆರ್ ದಾಖಲಿಸುವ ಮೂಲಕ ಸಿದ್ಧರಾಮಯ್ಯ ಸರ್ಕಾರವನ್ನು ಬೆತ್ತಲೆಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಪೊಲೀಸರಿಗೆ ಮೊದಲು ಸಂವಿಧಾನ ಓದಿಸಬೇಕು, ಈ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ, ಸಂವಿಧಾನದ ಪ್ರತಿಯನ್ನು ಪ್ರತಿ ಪೊಲೀಸ್ ಠಾಣೆಯಲ್ಲಿ ಇರಿಸಬೇಕು, ಅದನ್ನು ಓದಲು ಹೇಳಬೇಕು, ನಾವು ಯಾರನ್ನೂ ಅವಮಾನಿಸುತ್ತಿಲ್ಲ, ಜಿಲ್ಲೆಯ ಹಿತಾಸಕ್ತಿಗಾಗಿ ಹೋರಾಟ ನಡೆಯುತ್ತಿದೆ, ಈ ಬೇಡಿಕೆ ಈಡೇರಲಿ ಎಂಬುದು ನಮ್ಮ ಸದಾಶಯ, ಜನಪ್ರತಿನಿಧಿಗಳು ಈ ಆಶಯವನ್ನು ಈಡೇರಿಕೆಗೆ ಆದ್ಯತೆ ನೀಡಬೇಕು ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೆ ಯಾವ ವ್ಯತ್ಯಾಸವೂ ಇಲ್ಲ, ಪಿಪಿಪಿ ಎನ್ನುವುದು ಬಿಜೆಪಿ ಬಳವಳಿ, ಬಿಜೆಪಿ ನಾಯಕರು ಪಿಪಿಪಿ ವ್ಯವಸ್ಥೆಯನ್ನು ಮೊದಲು ಧಿಕ್ಕರಿಸಿ ಮಾತನಾಡಬೇಕು, ಪಿಪಿಪಿ ಇಲ್ಲಿ ಅಷ್ಟೇ ಅಲ್ಲ ಎಲ್ಲಿಯೂ ಪಿಪಿಪಿ ಇರಬಾರದು ಎಂದರು.
ಹೋರಾಟಗಾರ ಪ್ರಭುಗೌಡ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಅಕ್ಷಯಕುಮಾರ ಅಜಮನಿ ಇದ್ದರು.

