ಲೇಖನ
– ಶಿಲ್ಪಾ ಮೃತ್ಯುಂಜಯ ಮಿಣಜಿಗಿ
ಶಿಕ್ಷಕರು
ಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್
ಧಾರವಾಡ
ಉದಯರಶ್ಮಿ ದಿನಪತ್ರಿಕೆ
"ವೇದ ಸುಳ್ಳಾದರು ಗಾದೆ ಸುಳ್ಳಾಗದು" ಎನ್ನುವ ಮಾತಿನಂತೆ "ಮಾಸ್ತರ್ ಮಕ್ಕಳು ಬಹಳ ಶಾಣೆ ಇರ್ತಾರಂತೆ" ಎನ್ನುವ ಮಾತಿಗೆ ಪೂರ್ಣವಾದಂತಹ ನಿದರ್ಶನಕ್ಕೆ ಶ್ರೀಯುತ ಇಂದುಶೇಖರ ಮಣೂರ ಅವರನ್ನು ಉದಾಹರಣೆಯಾಗಿ ಹೆಸರಿಸಬಹುದಾಗಿದೆ.ಏಕೆಂದರೆ ಪತ್ರಿಕಾ ರಂಗದಲ್ಲಿ ಪ್ರಸಿದ್ದಿ ಹೊಂದುವುದೆಂದರೆ ಮುದ್ರಣವಾಗುವ ಪ್ರತಿಯೊಂದು ಅಕ್ಷರಗಳು ಓದುಗರ ಮನಸ್ಸೆಂಬ ಸ್ಪರ್ಧೆಯಲ್ಲಿ ವಿಜಯಶಾಲಿಯಾದಾಗ ಮಾತ್ರ ಅಭಿವೃದ್ಧಿಯ ಹಂತವನ್ನು ತಲುಪಲು ಸಾಧ್ಯ. “ಛಲವಿಲ್ಲದವರನೊಲ್ಲ ನಮ್ಮ ಕೂಡಲಸಂಗಮದೇವ” ಎಂಬ ಶರಣರ ವಾಣಿಯಂತೆ ಇಂದುಶೇಖರ ಅವರು ತಮ್ಮ ಸಂಪಾದಕತ್ವದ “ಉದಯರಶ್ಮಿ” ಕನ್ನಡ ದಿನಪತ್ರಿಕೆಯಲ್ಲಿ ಯುವ ಸಾಹಿತಿಗಳು, ಮತ್ತು ಬರಹಗಾರರಿಗೆ, ಪ್ರೋತ್ಸಾಹ ನೀಡುತ್ತ ಅವರ ಲೇಖನಕ್ಕೆ ತಮ್ಮ ಪತ್ರಿಕೆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸುತ್ತಾರೆ. ಯಾವುದೇ ಫಲಾಪೇಕ್ಷೆ ಬಯಸದೆ ಎಲೆಮರೆಯ ಕಾಯಿಯಂತಿರುವ ನನ್ನಂತಹ ಅನೇಕ ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ನಮ್ಮ ಸಾಹಿತ್ಯ ಕೃಷಿಗೆ ನೀರೆರೆದು ಪೋಷಿಸುತ್ತಾರೆ. ಇವರ ಪತ್ರಿಕೆಯನ್ನು ಗಮನಿಸಿದಾಗ ನನಗೆ ಅನುಭವವಾದ ಮಾತು ಇದು.

ಗದುಗಿನ ಲಿಂ. ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಅಪ್ಪಟ ಪ್ರೀತಿಯ ಖಾಸ ಭಕ್ತರೆಂದು ಇಂದುಶೇಖರ ಅವರು ಬಹಳ ಪ್ರೀತಿಯಿಂದ, ಹೆಮ್ಮೆಯಿಂದ ನುಡಿಯುತ್ತಾರೆ. ಅನೇಕ ಬಾರಿ ಶ್ರೀಗಳ ದರ್ಶನಕ್ಕೆ ಗದುಗಿಗೆ ತೆರಳಿ ಅವರ ಶಿಷ್ಯಪ್ರೀತಿಯ ಆತಿಥ್ಯ ಸವಿದಿದ್ದಾರೆ.
ಗದುಗಿನ ಲಿಂ. ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಇಂದುಶೇಖರ ಅವರ ತಂದೆ ಸಿದ್ದಣ್ಣ ಮಣೂರ ಮಾಸ್ತರ ಅವರ ಪ್ರೀತಿಯ ಶಿಷ್ಯರಾಗಿದ್ದರು. ವಿಜಯಪುರ ಜಿಲ್ಲೆಯ ಸಿಂದಗಿ ಊರಲ್ಲಿ ಮುಲ್ಕಿ ಪರೀಕ್ಷೆವರೆಗೆ (ಇಂದಿನ ಏಳನೆಯ ತರಗತಿವರೆಗೆ) ಅವರ ಗರಡಿಯಲ್ಲೇ ಪಳಗಿದ್ದರು. ಶ್ರೀಗಳು ಬದುಕಿರುವವರೆಗೂ ತಮ್ಮ ಭಾಷಣಗಳಲ್ಲಿ ಆಗಾಗ ಎಸ್.ಎಂ.ಮಣೂರ ಮಾಸ್ತರ ಹೆಸರನ್ನು ಪ್ರಸ್ತಾಪಿಸಿ ಅವರ ಆದರ್ಶಗಳನ್ನು ಹೇಳುತ್ತಿದ್ದುದನ್ನು ಗಮನಿಸಿದರೆ ಗದುಗಿನ ಶ್ರೀಗಳಿಗೆ ಮಣೂರ ಮಾಸ್ತರ ಮೇಲಿರುವ ಗೌರವ ಎದ್ದುಕಾಣುತ್ತದೆ.

ಇಂದುಶೇಖರ ಅವರ ತಂದೆಯ ಶಿಷ್ಯರು ಗದುಗಿನ ಲಿಂ.ಸಿದ್ದಲಿಂಗ ಶ್ರೀಗಳು, ಇಂದುಶೇಖರ ಮಣೂರ ಅವರು ಲಿಂ.ಸಿದ್ದಲಿಂಗ ಶ್ರೀಗಳ ಅಭಿಮಾನದ ಅನುಯಾಯಿಗಳು. ನಾನು ಭಕ್ತಿಯಿಂದ ಪೂಜಿಸುತ್ತ ಬಂದಿರುವ ಲಿಂ.ಸಿದ್ದಲಿಂಗ ಶ್ರೀಗಳು ನನಗೆ ತಂದೆಯಂತೆ. ಈಗ ನನ್ನ ಬರಹಗಳಿಗೆ, ಸಾಹಿತ್ಯ ಕೃಷಿಗೆ ಬೆಂಬಲಿಸಿ ಬೆನ್ನುತಟ್ಟುತ್ತಿರುವ ಇಂದುಶೇಖರ ಅವರೂ ಸಹ ನನಗೆ ಒಂದು ರೀತಿಯಲ್ಲಿ ಗುರುವಿದ್ದಂತೆ. ಈ ಸಂಬಂಧಗಳ ಕೊಂಡಿಗಳು “ಎತ್ತಣಿಂದೆತ್ತ ಸಂಬಂಧವಯ್ಯಾ..” ಎನ್ನುವಂತಿದ್ದರೂ ಗದುಗಿನ ಪೂಜ್ಯ ಶ್ರೀಗಳ ಮೇಲಿನ ಭಕ್ತಿಯ ಭಾವ ನಮ್ಮನ್ನು ಬಂಧಿಸಿದೆ ಎಂಬ ನಂಬಿಕೆ ನನ್ನದು.
“ವ್ಯಕ್ತಿತ್ವ ಗೆದ್ದ ಕಡೆಗೆ ವ್ಯಕ್ತಿ ಗೆದ್ದೇ ಗೆಲ್ಲುತ್ತಾನೆ” ಎನ್ನುವಂತೆ ಇಂದುಶೇಖರ ಮಣೂರ ಇವರು ತಮ್ಮ ಬದುಕಿನಲ್ಲಿ ಎದುರಾದ ಅನೇಕ ಸಂಕಷ್ಟಗಳನ್ನು ದಿಟ್ವವಾಗಿ ಎದುರಿಸಿ ಪ್ರತಿಯೊಂದು ಹಂತದಲ್ಲಿ ವಿಜಯಶಾಲಿಗಳಾಗಿ ಪಕ್ವವಾಗುತ್ತ ಸಾಗಿದ್ದಾರೆ.
ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಗೌರವಿಸುವ ವ್ಯಕ್ತಿತ್ವದ ಇಂದುಶೇಖರ ಅವರು ಅಜಾತಶತ್ರುವಿನಂತೆ ಬದುಕಿನಲ್ಲಿ ಮುನ್ನಡೆದವರು. ಇತ್ತೀಚೆಗೆ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಪತ್ರಕರ್ತರು ಇಂದುಶೇಖರ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂತಹ ಮಹತ್ವದ ಸ್ಥಾನಕ್ಕೆ ಅವಿರೋಧವಾಗಿ ಚುನಾಯಿಸಿದ್ದೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಯಾರಲ್ಲೂ ಯಾವುದೇ ಬೇದಭಾವವಿಲ್ಲದೇ, ಸಮಾನವಾಗಿ ಕಾಣುವ ಇಂದುಶೇಖರ ಮಣೂರ ಅವರು, ಬಸವಾದಿ ಶರಣರ ತತ್ವಗಳಿಗೆ ಬದ್ದರಾದವರು. ಅವರ ನಿಲುವುಗಳನ್ನು ಪ್ರತಿಪಾದಿಸುವ ಇವರು ತಮ್ಮ “ಉದಯರಶ್ಮಿ” ದಿನಪತ್ರಿಕೆಯ ಅಡಿಬರಹವನ್ನು “ಜನಪರ-ಜೀವಪರ” ಎಂದು ಆಯ್ಕೆ ಮಾಡಿದ್ದಲ್ಲದೇ, ಪತ್ರಿಕೆಯನ್ನು ಅದೇ ಆಶಯದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಗಟ್ಟಿ ಮತ್ತು ನೈಜ ಸಿದ್ದಾಂತಗಳನ್ನು ದಿಟ್ಟವಾಗಿ ಪ್ರತಿಪಾದಿಸಿ ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ಅನೇಕ ಬಾರಿ ಸಮಾಜಕ್ಕೆ ತೋರಿಸಿಕೊಟ್ಟಂತಹ ಅವರು ನಮ್ಮಂತಹ ಯುವ ಬರಹಗಾರರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ನಾಡಿನ ಹಲವು ಶಿಕ್ಷಕರು, ಸಾಹಿತಿಗಳ, ಲೇಖಕರ ಬರಹಗಳಿಗೆ ಸುವರ್ಣ ವೇದಿಕೆಯನ್ನು ಕಲ್ಪಿಸಿ ಕೊಟ್ಟಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.
ಪತ್ರಿಕಾರಂಗದಲ್ಲಿ ೨೫ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಇಂದುಶೇಖರ ಅವರ ದಣಿವರಿಯದ ಸೇವೆಯನ್ನು ಗುರುತಿಸಿ ನಾಡಿನ ಅನೇಕ ಮಠ-ಮಾನ್ಯಗಳು ಮತ್ತು ಸಂಘ-ಸಂಸ್ಥೆಗಳು ಅವರಿಗೆ ನೀಡಿದ ಪ್ರಶಸ್ತಿಗಳು ಮತ್ತು ಗೌರವ ಸನ್ಮಾನಗಳು ಅನೇಕಾನೇಕ. ಅವು ಕೇವಲ ಪ್ರಶಸ್ತಿಗಳಲ್ಲ, ಅವರ ಮನಪೂರ್ವಕ ಸೇವೆಗೆ ಸಂದ ಗೌರವ ಎಂದೇ ಹೇಳಬಹುದು.
ಯಾವುದೇ ಸಂದರ್ಭದಲ್ಲಿಯೂ ನಾನು ಕರೆ ಮಾಡಿದಾಗ ತಮ್ಮ ಕಾರ್ಯದ ಒತ್ತಡ ಎಷ್ಟೇ ಇದ್ದರೂ ಸಹ ಇಂದುಶೇಖರ ಅವರು, ನನಗೆ ಮೃದು ಮಾತಿನಿಂದ ಉತ್ತರಿಸಿ, ಲೇಖನಗಳನ್ನು ಪ್ರಕಟಿಸುವ ವ್ಯಕ್ತಿತ್ವ ಇವರದಾಗಿದೆ. ಸರ್, ಎಲ್ಲ ಶರಣರ ಶುಭಾಶೀರ್ವಾದಗಳು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಇರಲಿ, ತಾವು ಮತ್ತು ತಮ್ಮ ಪತ್ರಿಕೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನಾನು ಬಸವಾದಿ ಶರಣರಲ್ಲಿ, ಗದುಗಿನ ತೋಂಟದ ಅಪ್ಪನವರಲ್ಲಿ ಪ್ರಾರ್ಥಿಸುವೆ.🙏🙏

ಪತ್ರಿಕಾರಂಗದಲ್ಲಿ ಇಂದುಶೇಖರ ನಡೆದುಬಂದ ದಾರಿ
೨೦೦೦ – ೨೦೦೩ ವರೆಗೆ ಹವ್ಯಾಸಿ ಪತ್ರಕರ್ತನಾಗಿ ನಾಡಿನ ಅನೇಕ ಪತ್ರಿಕೆಗಳಿಗೆ ಸೇವೆ.
೨೦೦೩ – ೨೦೦೭ ’ಪ್ರಜಾಧ್ವನಿ’ ಜನಪರ ಧೋರಣೆಯ ಪಾಕ್ಷಿಕ ಪತ್ರಿಕೆಯ ಪ್ರಕಾಶಕ ಹಾಗೂ ಸಂಪಾದಕನಾಗಿ ಸೇವೆ.
೨೦೦೮ – ೨೦೧೨ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಸಿಂದಗಿ ತಾಲೂಕು ವರದಿಗಾರನಾಗಿ ಸೇವೆ.
೨೦೧೨ – ೨೦೧೭ ’ಕನ್ನಡ ಪ್ರಭ’ ದಿನಪತ್ರಿಕೆಯ ಸಿಂದಗಿ ತಾಲೂಕು ವರದಿಗಾರನಾಗಿ ಸೇವೆ.
೨೦೧೬ ರಿಂದ ವಿದ್ಯಾರ್ಥಿ ನಿಧಿ’ ಮಾಸಪತ್ರಿಕೆಯ ( ಮಕ್ಕಳ ಮನೋವಿಕಾಸದ ಕೈಪಿಡಿ ) ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಣೆ.
೨೦೧೭ – ೨೦೨೧ ’ಭಾವತರಂಗ’ ಪಾಕ್ಷಿಕ ಪತ್ರಿಕೆಯ ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಣೆ.
೨೦೨೧ – ೨೦೨೨ ’ಸಂಜಯ ವಾಣಿ’ ದಿನಪತ್ರಿಕೆಯಲ್ಲಿ ಸೇವೆ
೨೦೨೨ ರಿಂದ ’ಉದಯರಶ್ಮಿ’ ದಿನಪತ್ರಿಕೆಯ ಹಾಗೂ ’ಉದಯರಶ್ಮಿ ನ್ಯೂಸ್’ ವೆಬ್ ಪತ್ರಿಕೆಯ ಸಂಪಾದಕನಾಗಿ ಸೇವೆಯಲ್ಲಿ ಮುಂದುವರಿಕೆ..


