ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಮುದ್ದು ಗೌರವ
ಸಂಪಿಗೆಯಂಥ ಮೂಗು, ದಾಳಿಂಬೆಯಂತಹ ದಂತಪಂಕ್ತಿ, ಕಾಮನಬಿಲ್ಲಿನಂತ ಹುಬ್ಬು, ನಾಗರ ಜಡೆ, ಎತ್ತರಕ್ಕೆ ತಕ್ಕ ಸಪೂರ ದೇಹ ನಕ್ಷತ್ರದಂತೆ ಹೊಳೆವ ಜೋಡಿ ಕಂಗಳು, ನಕ್ಕಾಗ ಬೀಳುವ ಗುಳಿ, ಎದುರಿನವರನ್ನು ತಿಳಿದು ಮಾತನಾಡುವ ಚತುರ ಮಾತುಗಾರಿಕೆ, ನಿರ್ಗತಿಕರನ್ನು ಕಂಡರೆ ಕನಿಕರ, ಸದಾ ಸಹಾಯ ಹಸ್ತ ಚಾಚುವವಳು ನಾನಾಗಿದ್ದರೂ ನನ್ನದು ಕೃಷ್ಣವರ್ಣವೆಂದು ನೋಡಲು ಬಂದ ಅನೇಕ ಗಂಡುಗಳು ಬಣ್ಣ ಕಂಡು ಬೆನ್ನು ತೋರಿಸಿ ಹೋದರು. ಸಂಬಂಧ ಬೆಸೆಯುವುದು ಬಣ್ಣದಿಂದಾರೆ ಮದುವೆಯೇ ಬೇಡವೆಂದು ಮನದಲ್ಲಿ ನಿರ್ಧರಿಸಿಯಾಗಿತ್ತು.
ಈಗಿನ ಕಾಲದಲ್ಲಿ ರೂಪ ಇದ್ದವರಲ್ಲೂ ಬೇರೆ ಬೇರೆ ಕೊಂಕು ತೆಗೆದು ವಿವಾಹ ಬೇಡವೆನ್ನುವವರು ಇದ್ದಾರೆ. ಅಂಥದ್ದರಲ್ಲಿ ಗುಣಕ್ಕೆ ಪ್ರಾಶಸ್ತ್ಯ ಕೊಡುವವರು ವಿರಳ. ವಿವಾಹ ಯೋಗ ಕೂಡಿ ಬರುವುದಂತೂ ವಿರಳಾತಿವಿರಳ. ಹುಡುಗಿ ಲಕ್ಷಣವಾಗಿದ್ದಾಳೆ ಆದರೆ ಎಂದು ರಾಗ ಎಳೆಯುವವರೇ ಹೆಚ್ಚು. ರೂಪ ಕಪ್ಪಿರಬಹುದು ಮನಸ್ಸು ಮಾತ್ರ ಹಾಲಿನಂತೆ ಶುದ್ಧ. ಎಂಬುದು ಅಪ್ಪ ಅವ್ವನ ಮಾತು. ಕೃಷ್ಣವರ್ಣದವಳಾದರೂ ತುಂಬ ಲಕ್ಷಣ ಇದ್ದಾಳೆ. ಸೀರೆಯುಟ್ಟು ಚೆಂದದ ಸಿರಿದೇವಿ ತರ ಗೌರಿ ತರ ಎನ್ನುವವರೂ ಇದ್ದರು.
ಆಫೀಸಿನಲ್ಲಿ ಜೊತೆಗೆ ಕೆಲಸ ಮಾಡುವ ನೀನು ನನ್ನ ಕಂಡಾಗಲೊಮ್ಮೆ ತಪ್ಪದೇ ನನ್ನೆಡೆಗೆ ಚೆಲ್ಲಿದ ಕಿರುನಗು ಒಲವ ಸುವಾಸನೆ ಬೀರುತ್ತಿತ್ತು. ಕಪ್ಪು ಬಣ್ಣದವಳು ಅಂತ ದೂರ ಸರಿದ ಗೆಳತಿಯರು ಇದ್ದಾರೆ. ಅಷ್ಟೇ ಅಲ್ಲ ಕಛೇರಿ ಸಹೋದ್ಯೋಗಿಗಳು ನನ್ನ ಪಕ್ಕಕ್ಕೆ ಕುಳಿತುಕೊಳ್ಳುವ ಮೂಗು ಸರಿಯಿಲ್ಲದ ಬಿಳಿ ಬಣ್ಣದವಳನ್ನು ನೋಡಿ ನಗೆ ಬೀರುತ್ತಾರೆಯೇ ಹೊರತು ನನ್ನನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದರು. ಆದರೆ ನೀನು ಮಾತ್ರ ನೆಪ ಹುಡುಕಿಕೊಂಡು ಬಂದು ಮುದ್ದಾಂ ಮಾತನಾಡಿಸುತ್ತಿದ್ದೆ. ಬರುವಾಗ ಹೋಗುವಾಗ ನನ್ನ ಹೆಜ್ಜೆಗಳನ್ನು ಅನುಸರಿಸುತ್ತಿದ್ದೆ. ಇದೆಲ್ಲ ಕಂಡು ನಿನ್ನಲ್ಲಿ ಒಲವು ಅಂಕುರವಾಗಿದೆ ಎಂದೆನಿಸಿದರೂ ನಾನು ಮುಂದೆ ಹೆಜ್ಜೆ ಇಡಲು ಧೈರ್ಯ ಮಾಡಿರಲಿಲ್ಲ.

ಎಂದಿನAತೆ ಆಫೀಸ್ ಬಿಟ್ಟ ಮೇಲೆ ನನ್ನ ಹಿಂದೆ ನೀನು ನಿನ್ನ ಮುಂದೆ ನಾನು ಫೂಟ್ ಪಾತ್ ಪಯಣ ಶುರುವಾಗಿತ್ತು. ಇದ್ದಕ್ಕಿದ್ದಂತೆ ದಪ್ಪ ದಪ್ಪ ಹನಿಗಳು ಹಣೆ ಮತ್ತು ಕೆನ್ನೆಯನ್ನು ಸ್ಪರ್ಷಿಸತೊಡಗಿದವು. ಬರಬರುತ್ತ ಮಳೆರಾಯ ಮೈ ಕೈಗಳನ್ನು ಬಿಡದೇ ಮೆಲ್ಲನೇ ಸ್ಪರ್ಶಿಸತೊಡಗಿದ. ಆ ವರುಣನ ಮಂತ್ರಮುಗ್ಧತೆಯಲ್ಲಿ ತಲ್ಲೀನಳಾದೆ. ಮಳೆ ಬರುವ ವಾತಾವರಣವಿಲ್ಲವೆಂದು ಕೊಡೆ ಬಿಟ್ಟು ಬಂದಿದ್ದೆ. ನನ್ನನ್ನು ನೋಡಿ ಗೌರಿ ಮೇಡಂ ಮಳೆಯಲ್ಲಿ ನೆನೆಯುತ್ತಿದ್ದೀರಿ ಬನ್ನಿ ನನ್ನ ಕೊಡೆ ಕೆಳಗೆ ಎಂದು ನೀನೇ ಓಡಿ ಬಂದೆ. ನಿನ್ನ ಆ ನೋಟ ಪ್ರೀತಿಯನ್ನು ಮೀರಿಸಿತ್ತು. ಇದೆಲ್ಲ ನನಗೆ ಮುಜುಗರ ತರುವಷ್ಟರಲ್ಲಿ ಗಾಳಿಯ ಆರ್ಭಟಕ್ಕೆ ಛತ್ರಿ ಹಾರಿ ಹೋಯಿತು.
ಮುಂದೇನು ಎನ್ನುವಂತೆ ನಿನ್ನ ಮುಖ ನೋಡಿದೆ. ಮಳೆ ಜೋರಿದೆ ಅಲ್ಲೊಂದು ಪುಟ್ಟ ಮನೆ ತರ ಕಾಣಿಸುತ್ತಿದೆ. ಹೋಗೋಣ ಬನ್ನಿ ಎಂದೆ. ನಾನು ಮರುಮಾತಿಲ್ಲದೇ ನಿನ್ನನ್ನು ಹಿಂಬಾಲಿಸಿದೆ. ಆ ಮನೆಗೆ ಬೀಗ ಹಾಕಿತ್ತು. ಇದ್ದ ಸ್ವಲ್ಪ ಜಾಗದಲ್ಲಿ ಸುರಿವ ಮಳೆಯಲ್ಲಿ ಒಬ್ಬರಿಗೊಬ್ಬರು ಇನ್ನೇನು ಅಂಟಿಕೊಂಡು ನಿಲ್ಲಬೇಕಿತ್ತು. ಸೀರೆ ಒದ್ದೆಯಾಗಿತ್ತು. ರವಿಕೆಯೂ ಮೈಗೆ ಅಂಟಿಕೊಂಡಿತ್ತು. ಇದೇನು ಪಜೀತಿ ಎಂದು ಯೋಚಿಸುತ್ತಿರುವಾಗಲೇ ನನ್ನತ್ತ ನೋಡುತ್ತ ನಿನ್ನ ಜಾಕೆಟ್‌ನ್ನು ಒದ್ದೆಯಾಗಿದ್ದ ನನ್ನ ದೇಹಕ್ಕೆ ಹಾಕುವಾಗ ನಿನ್ನ ಬೆರಳೊಂದು ಕೈಗೆ ತಾಕಿತು. ಮೈ ಸಣ್ಣಗೆ ಕಂಪಿಸಿತು.
ನೀವು ಕೃಷ್ಣವರ್ಣೆಯಾದರೂ ತಿದ್ದಿ ತೀಡಿ ಮಾಡಿಟ್ಟ ಶಿಲಾಬಾಲಿಕೆಯಂತೆ ಇರುವಿರಿ ಎಂದೆ. ಬಿಳಪು ಹೇಗೆ ಒಂದು ಬಣ್ಣವೋ ಕಪ್ಪು ಕೂಡ ಒಂದು ಬಣ್ಣವೇ. ಶ್ರೀ ಕೃಷ್ಣ ಕಪ್ಪು ವರ್ಣದವನು. ಕೃಷ್ಣೆ ಅಂದರೆ ದ್ರೌಪದಿ ಕೂಡ ಶ್ಯಾಮಲ ವರ್ಣದವಳು. ನನಗೆ ಏನು ಹೇಳಬೇಕು ಅಂತ ತಿಳಿಯದೇ ಮುಗುಳ್ನಗೆ ಬೀರುತ್ತ ತಲೆಯಾಡಿಸಿದೆ. ನೀವು ಹ್ಞೂಂ ಅಂದರೆ ಅಂತ ಪೀಠಿಕೆ ಹಾಕುವಷ್ಟರಲ್ಲಿ ಜೋರಾಗಿ ಗುಡುಗಿತು. ಗುಡುಗಿಗೆ ನಾನು ಹೆದರಿದೆ ನನಗರಿವಿಲ್ಲದೆ ನಿನ್ನ ತಬ್ಬಿದೆ. ನಿನ್ನ ಹರವಾದ ಎದೆಯಲ್ಲಿ ನನ್ನ ಮೊಗವಿತ್ತು. ನಿನ್ನ ಬಾಹುಗಳು ನನ್ನನ್ನು ಆಪ್ತವಾಗಿ ಆಲಿಂಗಿಸಬೇಕೆಂದು ಅನುಮಾನಿಸುತ್ತಿದ್ದವು. ಆದರೆ ನನ್ನ ಅಪ್ಪುಗೆಯಿಂದ ಬಿಸಿಯಾದ ನಿನ್ನ ದೇಹ ಅವುಗಳಿಗೆ ಧೈರ್ಯ ಕೊಟ್ಟಿತು. ಅರ್ಧಕ್ಕೆ ನಿಲ್ಲಿಸಿದ ಮಾತು ಪೂರ್ಣಗೊಳಿಸಿದೆ. ನನಗಾಗ ಆಕಾಶ ಮೂರೇ ಗೇಣು ಉಳಿದಂತಾಯಿತು. ’ನಿನಗೆ ಅನುರೂಪನಾದ ವರ ಸಿಕ್ಕೇ ಸಿಗುತ್ತಾನೆ ಎಂದು ಹೇಳಿದ ಅಜ್ಜಿ ಮಾತು ನೆನಪಾಯಿತು. ನೀ ಹೇಳಿದ ಮಾತಿನ ಮುಂದೆ ನೋವು, ಹತಾಶೆಗಳೆಲ್ಲ ಶೂನ್ಯವೆಂದೆನಿಸಿದವು.
ಮನಸ್ಸು ಮನಸ್ಸು ಒಂದಾದ ಮೇಲೆ ಇನ್ನೇನೂ ಬೇಕಾಗದು. ಮನಸ್ಸಿನ ಮಿಲನದ ಮುಂದೆ ಯಾವ ರೂಪ ಆಕಾರ ಕೆಲಸ ಮಾಡವು. ಬಣ್ಣಕ್ಕಿಂತ ಗುಣ ಮುಖ್ಯ ಎಂಬ ಮಾತುಗಳನ್ನು ಕೇಳಿದಾಗ ಕಣ್ಣಿನಿಂದ ಆನಂದಭಾಷ್ಪವೊAದು ಉದುರಿತ್ತು ಜಾರಿ ನಿನ್ನ ಕೈ ಮೇಲೆ ಬಿತ್ತು. ಹಣೆಗೆ ಕೆನ್ನೆಗೆ ಮೆಲ್ಲನೆ ಮುದ್ದಿಸುತ್ತ ನನಗೆ ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಗಿತ್ತು. ಆದರೆ ನಿನ್ನ ಕೇಳಲು ಧೈರ್ಯ ಸಾಲಲಿಲ್ಲ ಅಂತ ಮಾತು ಮುಂದುವರೆದಿತ್ತು. ತಡೆಯಲಾರದ ಸಂತಸಕ್ಕೆ ಜೀವ ಹೂವಾಯಿತು ನಿನ್ನ ಮೇಲೆ ಹೂ ಮುತ್ತಿನ ಮಳೆಗರೆಯುತ್ತಿದ್ದೆ. ಕಣ್ಮುಚ್ಚಿ ಸುಂದರವಾದ ಕಲ್ಪನೆಗಳಿಗೆ ಜಾರಿದ್ದೆ. ಬೆರಳುಗಳು ಒಂದನ್ನೊಂದು ಸಂಧಿಸಿ ಬಿಗಿಯಾಗಿ ಬಂಧಿಸಿಕೊಂಡಿದ್ದವು.
ನನಗೆ ಅಜ್ಜಿ ಏ! ನಿನಗೆ ಗೊತ್ತಿಲ್ಲ ಮದುವೆ ಒಂದು ಸುಂದರ ಅನುಭವ ಎಂದ ಮಾತು ನೆನಪಾಯಿತು. ನನ್ನ ನಿನ್ನ ಪ್ರಥಮ ರಾತ್ರಿಯ ಕುರಿತು ಕನಸು ಕಾಣಲು ಶುರು ಮಾಡಿತು ತುಂಟ ಮನಸ್ಸು. ಬೇಸರದ ಛಾಯೆ ಇಲ್ಲದ ಹಸನ್ಮುಖ ಕಂಡು ಅಜ್ಜಿ ನಿನ್ನ ನನ್ನ ನಡುವೆ ನಡೆದದ್ದನ್ನು ಕೇಳಿ ಬಲು ಖುಷಿಯಿಂದ ನಕ್ಕು ಹೇಳಿದಳು. ಅವನು ನಿನಗಾಗಿಯೇ ಹುಟ್ಟಿದ್ದಾನೆ. ಜನುಮದ ಜೋಡಿ ನೀವಿಬ್ಬರೂ. ಸ್ನಾನ ಮಾಡಿ ದೇವರಿಗೆ ತುಪ್ಪದದೀಪ ಹಚ್ಚು ಎಂದಳು. ಮರುದಿನ ನಿನ್ನ ಆಫೀಸಿನಲ್ಲಿ ಎದುರಿಸುವುದು ಹೇಗೆ ಎಂದು ನಾಚುತ್ತಿದ್ದೆ. ಆಗ ನಿನ್ನ ಸಂಭಾಷಣೆ ಮಾತಿಗಿಂತ ಹೆಚ್ಚಾಗಿ ಕಣ್ಣಿನಲ್ಲೇ ನಡೆಯತೊಡಗಿತು. ಒಂದು ಸಂಜೆ ನನ್ನನ್ನು ಹಿಂಬಾಲಿಸಿ ಯಾವಾಗ ಮದುವೆಯ ಮಮತೆಯ ಕರೆಯೋಲೆ ಎಂದು ಮೃದು ಧ್ವನಿಯಲ್ಲಿ ಕೇಳಿದೆ. ಅಮ್ಮನಿಗೆ ಹೇಳಲು ನನಗೆ ನಾಚಿಕೆ. ಮನೆಗೆ ಬಂದು ಅಪ್ಪನನ್ನು ಒಪ್ಪಿಸಿ ನಾನಿಗಾಗಲೇ ಅಪ್ಪಿಯಾಗಿದೆ ಒಪ್ಪಿಯಾಗಿದೆ ಬಂಗಾರದ ಜೀವನ ಮುಂದೆ ಕಾದಿದೆ ಎಂದೆ. ಅಷ್ಟರಲ್ಲಿ ಇಬ್ಬರ ಮನೆಯಲ್ಲಿ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದಾಗಿದೆ ಎಂದೆ. ಹತ್ತಿರ ನಿಂತ ನಿನ್ನ ಬಿಸಿಯುಸುರು ಸೋಕಲು ನಿಂತಲ್ಲೇ ಕಳೆದು ಹೋದೆ. ಸುಳಿವ ಗಾಳಿಗೆ ಸೀರೆ ಸೆರಗು ಸರಿದಿತ್ತು ಸೀರೆ ಸರಿಪಡಿಸಿಕೊಳ್ಳತೊಡಗಿದೆ ನೀನು ಕಣ್ಣು ಕಿರುದಾಗಿಸುತ್ತ ಕೃಷ್ಣವೇಣಿಯವರಿಗೆ ನನ್ನ ಬೈಕಿನ ಹಿಂದಿನ ಸೀಟು ಖಾಲಿಯಿದೆ ಎಂದೆ. ನನ್ನ ನೋಟದ ತೀವ್ರತೆಯನ್ನು ಸಹಿಸಲಾಗದೆ ಲಘುವಾಗಿ ತಬ್ಬಿದೆ.
ಈಗ ಮಳೆಗಾಲ ಮುಗಿದು ಕೊರೆವ ಚಳಿ ಶುರುವಾಗಿದೆ. ನವಿರಾದ ಬೆನ್ನಿಗೆ ನಿನ್ನ ಬೆರಳಿನ ಸ್ಪರ್ಶದ ಅಮಲಿನಲ್ಲಿ ತೇಲಾಡುವಾಸೆ. ಹೊಸ ಹೊಸ ಕನಸುಗಳನು ಒಡಲಾಳದಲ್ಲಿ ಹುಟ್ಟಿಸಿಕೊಂಡು ರಂಗಿನಾಟದಲ್ಲಿ ಮುಳುಗುವಾಸೆ ಎಂದು ಹೇಳಲು ಹೆಣ್ಣು ಜೀವಕೆ ನಾಚಿಕೆ.
ನಿನ್ನ ಮುದ್ದಿನ ಕೃಷ್ಣವೇಣಿ.


