ವಿಜಯಪುರದಲ್ಲಿ ವೃಕ್ಷೆೊಥಾನ್ ಟ್ರಸ್ಟ್ನ ಸಂಚಾಲಕ ಡಾ.ಮಹಾಂತೇಶ ಬಿರಾದಾರ ವಿವರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ ರಕ್ಷಣೆಯ ದೃಷ್ಟಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಧ್ಯೇಯೋದ್ದೇಶದಿಂದ ಡಿಸೆಂಬರ್ ೭ ರಂದು ನಡೆಯಲಿರುವ ವೃಕ್ಷೆೊಥಾನ್‌ಗೆ ಈ ಬಾರಿ ಸಾಂಸ್ಕೃತಿಕ ಸ್ಪರ್ಶ ನೀಡಲಾಗಿದ್ದು, ಓಟ ನಡೆಯುವ ಸ್ಥಳಗಳಲ್ಲಿ ಭಾರತೀಯ ಕಲಾ ಸಂಸ್ಕೃತಿಯ ಭವ್ಯತೆ ಅನಾವರಣಕ್ಕೆ ವಿಶೇಷ ವೇದಿಕೆ ರೂಪಿಸಲಾಗುತ್ತಿದೆ.
ಆಯಾ ಸ್ಥಳಗಳಲ್ಲಿ ಕಲಾ ವೈವಿಧ್ಯಮ ಸಾರುವ ವಿಶೇಷ ವೇದಿಕೆಗಳಲ್ಲಿ ಕಲಾ ತಂಡಗಳು ತಮ್ಮ ಕಲಾ ಪ್ರೌಢಿಮೆಯನ್ನು ನಿರೂಪಿಸಲಿವೆ.
ಸೋಮವಾರ ಈ ಕುರಿತು ವಿವರಣೆ ನೀಡಿದ ವೃಕ್ಷೆೊಥಾನ್ ಟ್ರಸ್ಟ್ನ ಸಂಚಾಲಕ ಡಾ.ಮಹಾಂತೇಶ ಬಿರಾದಾರ, ಆರನೇಯ ಬಾರಿಗೆ ವೃಕ್ಷೆೊಥಾನ್ ವಿಜಯಪುರ ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದು, ಈ ಬಾರಿ ೨೦ ಸಾವಿರಕ್ಕೂ ಹೆಚ್ಚು ಜನರು ಓಟದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದು, ಉದ್ದೇಶವೊಂದಕ್ಕೆ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ನವ ದಾಖಲೆ ಬರೆಯಲು ವಿಜಯಪುರ ಜನತೆ ಸಜ್ಜಾಗಿದ್ದಾರೆ, ಹೀಗಾಗಿ ಈ ಬಾರಿ ಓಟಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ವಿವರಿಸಿದರು.
ಡಾ. ಬಿ. ಆರ್. ಅಂಬೇಡ್ಕರ್ ಒಳ ಆವರಣದಲ್ಲಿ ಪುಣೆಯ ಆಸ್ಟಿನ್ ಅವರಿಂದ ಜುಂಬಾ ಡ್ಯಾನ್ಸ್, ಓಟದ ಪ್ರಾರಂಭಿಕ ಸ್ಥಳದಲ್ಲಿ ಉದ್ಯಮಿ ಅನಿಲ ಧಾರವಾಡಕರ ಹಾಗೂ ಶ್ರೀಕಾಂತ ಮಂತ್ರಿ ಅವರ ವತಿಯಿಂದ ವಿಶೇಷ ವೇದಿಕೆ ನಿರ್ಮಿಸಿ ಅಲ್ಲಿ ಕಲಾವಿದರು ಕಹಳೆ ವಾದನ ಮಾಡಲಿದ್ದು, ಕರಡಿ ಮಜಲು ಸಹ ಗಮನ ಸೆಳೆಯಲಿದೆ, ಕನಕದಾಸ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೧೪ ಕಲಾವಿದರಿಂದ ಬೃಹತ್ ಗೊಂಬೆಗಳ ಕುಣಿತ ಮಾಡಲಿದ್ದು, ಓಟಕ್ಕೆ ವಿಶೇಷ ಮೆರಗು ದೊರಕಲಿದೆ, ಆಸಾರ ಮಹಲ್ ಮುಂಭಾಗದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ವಿವಿಯ ೪೦ ವಿದ್ಯಾರ್ಥಿನಿಯರಿಂದ ಬ್ಯಾಂಡ್ ವಾದನ ಮಾಡಿ ಓಟಗಾರರ ಹುಮ್ಮಸ್ಸು ಹೆಚ್ಚಿಸಲಿದ್ದು, ದರಬಾರ ಹೈಸ್ಕೂಲ್ ಮೈದಾನದ ಮುಂಭಾಗದಲ್ಲಿ ಸನ್ನಿ ಗವಿಮಠ ಅವರು ವಿಶೇಷ ವೇದಿಕೆ ರೂಪಿಸಿ ಅಲ್ಲಿ ಯುವತಿಯಿಂದ ಚಿಯರ್ ಅಪ್ ಎಂಬ ವಿಶೇಷಶೈಲಿ ನೃತ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಡಾ.ಬಿರಾದಾರ ವಿವರಿಸಿದರು.
ಕಲಾ ಸಂಸ್ಕೃತಿಯ ಅನಾವರಣ
ಇದೆಲ್ಲವುಗಳ ಜೊತೆಗೆ ಗೋಳಗುಮ್ಮಟ ರಸ್ತೆಯಲ್ಲಿ ಶೋಭಾ ನರ್ಸಿಂಗ್ ಹೋಂನ ಡಾ. ಶಂಕರಗೌಡ ಪಾಟೀಲ ವತಿಯಿಂದ ೧೦ ಜನರ ತಂಡದಿಂದ ತಾಷಾ ವಾದನಕ್ಕೆ ಅವಕಾಶ, ಮಾಜಿ ಉಪಮೇಯರ್ ದಿನೇಶ ಹಳ್ಳಿ ಅವರ ವತಿಯಿಂದ ಕೇರಳದ ೩೫ ಜನ ಮಹಿಳಾ ಕಲಾವಿದರಿಂದ ಫ್ಲವರ್ ಡ್ಯಾನ್, ಮೈಲಾರಲಿಂಗೇಶ್ವರ ಕೊರವ ಕುಣಿತ, ಹಾಗೂ ಶೃಂಗಾರ ನೃತ್ಯ ಸಹ ನಡೆಯಲಿದೆ, ಬಸವೇಶ್ವರ ವೃತ್ತದಲ್ಲಿ ಅರುಣ ಹುಂಡೆಕಾರ ಅವರ ಸ್ಪೂರ್ತಿ ಫೌಂಡೇಶನ್ ವತಿಯಿಂದ ಖಾನಾಪುರ ಎಸ್. ಕೆ. ಶ್ರೀ ಹೆಬ್ಬಳ್ಳೆಮ್ಮಾ ಗೊಂಬೆ ಕುಣಿತ ತಂಡ ಮತ್ತು ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳಿನ ಕಲಾ ತಂಡಗಳಿಂದ ಪ್ರದರ್ಶನ ಗಮನ ಸೆಳೆಯಲಿದೆ. ಗಾಂಧಿವೃತ್ತದಲ್ಲಿ ಡಾ. ಪ್ರಭುಗೌಡ ಪಾಟೀಲ ಅವರ ಅನುಗೃಹ ಆಸ್ಪತ್ರೆ ವತಿಯಿಂದ ಶಿರಸಿಯ ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿಯ ೧೦ ಕಲಾವಿದರಿಂದ ಚಿಯರ್ ಅಪ್ ನೃತ್ಯ ನಡೆಯಲಿದ್ದು, ಸೈನಿಕ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಲಿದ್ದು, ಶಿವಾಜಿ ವೃತ್ತದಲ್ಲಿ ಪಾಲಿಕೆ ಶ್ರೀ ರಾಮನವಮಿ ಉತ್ಸವ ವತಿಯಿಂದ ಹಲಗೆ ವಾದನ ಸಹ ನಡೆಯಲಿದ್ದು, ಇನ್ನೂ ಹಲವಾರು ಸ್ಥಳಗಳಲ್ಲಿ ಕಲಾ ಸಂಸ್ಕೃತಿಯ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.
ಪ್ರೊ.ಮುರುಗೇಶ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಸೋಮು ಮಠ, ಅಮಿತ ಬಿರಾದಾರ, ವಿನಯ ಕಂಚ್ಯಾಣಿ, ನವೀದ್ ನಾಗಠಾಣ ಮೊದಲಾದವರು ಪಾಲ್ಗೊಂಡಿದ್ದರು.


