ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಮನುಷ್ಯ ಸಂಘಜೀವಿ, ಇಂದು ಮೊಬೈಲ್ ಹಾವಳಿಯಿಂದ ಜೀವನದಲ್ಲಿ ಒಂಟಿಯಾಗಿದ್ದು ಭೇದ ಭಾವ ತೊರೆದು ಎಲ್ಲರೊಂದಿಗೂ ಬೆರೆತು ಸುಂದರ ಬದುಕಿನ ದಿವ್ಯಜ್ಯೋತಿಯನ್ನು ಬೆಳಗಬೇಕೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದಲ್ಲಿ ಶ್ರೀ ಪ್ರಭುಲಿಂಗೇಶ್ವರ ಕಾರ್ತಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಕಾರ್ತಿಕ ಮಾಸದ ಮಾಗಿಯ ಛಳಿಯಿಂದ ಪ್ರಕೃತಿದತ್ತ ಬರುವ ರೋಗಾಣುಗಳನ್ನು ನಾಶಗೊಳಿಸಲು ಆಚರಣೆಗೆ ತಂದಿರುವ ಈ ದೀಪೋತ್ಸವದಿಂದ ಮನುಷ್ಯರ ಜೀವನ ಬೆಳಗಲಿದೆಯಂದರು. ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ ಗ್ರಾಮದಲ್ಲಿ ಪ್ರತಿಯೊಂದು ಧರ್ಮದ ಪೂರ್ವಜರು ಆಚರಣೆಗೆ ತಂದಿರುವ ಹಬ್ಬ, ಹರಿದಿನ, ಧಾರ್ಮಿಕ, ಸಾಮಾಜಿಕ ಉತ್ಸವಗಳಿಗೆ ವೈಜ್ಞಾನಿಕ ಹಿನ್ನೆಲೆಗಳಿವೆ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಅನ್ನಪ್ರಸಾದ ವಿತರಿಸುವ ಪದ್ದತಿ ದೈವ ನೀಡಿದ ಮಹತ್ವದ ಕೊಡುಗೆಯಾಗಿದ್ದು ಅನ್ನ ಸಂತರ್ಪಣೆ ನಡೆಯುವ ಮನೆಗಳು ಸಕಲ ಸೌಭಾಗ್ಯಗಳಿಂದ ಕೂಡಿದ್ದು ಹದಿನಾಲ್ಕು ಬ್ರಹ್ಮಗಳಲ್ಲಿ ಅನ್ನ ಪೂರ್ಣಬ್ರಹ್ಮವಾಗಿದೆ ಎಂದರು.
ಪ್ರಮುಖರಾದ ಪರಪ್ಪಾ ಪಾಲಭಾವಿ, ಗುರಲಿಂಗಪ್ಪ ಪೂಜಾರಿ, ಶಿಕ್ಷಕ ಪ್ರಕಾಶ ಪೂಜಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಪ್ಪಾ ಬಗನಾಳ, ಈಶ್ವರ ಬಡಿಗೇರ ಗ್ರಾಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಬೀರಪ್ಪಾ ಹಳೆಮನಿ, ನಿಂಗಣ್ಣ ಪೂಜಾರಿ, ಆನಂದ ಕವಟಿ, ಅಶೋಕ ಧಡೂತಿ, ಪರಪ್ಪ ನೇಸೂರ, ಪ್ರಭು ಮುಧೋಳ, ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಕಛೇರಿಯ ಆವರಣದಿಂದ ಬನಶಂಕರಿ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ದ್ಯಾಮವ್ವದೇವಿ ದೇವಸ್ಥಾನ, ಶ್ರೀ ವಿರಕ್ತಮಠ, ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ಟ್ಯಾಂಕರ ಮೂಲಕ ನೀರಿನಿಂದ ಶುಚಿಗೊಳಿಸಿ ರಂಗೋಲಿ ಹಾಕಿ ಸಾವಿರಾರು ದೀಪಗಳನ್ನು ಬೆಳಗಿಸುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಅಧ್ದೂರಿಯಾಗಿ ಆಚರಿಸಲಾಯಿತು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿಯವರು ಕಾರ್ಯಕ್ರಮದಲ್ಲಿ ದಾಸೋಹ ಸೇವೆ ನೆರವೇರಿಸಿದ ಪ್ರಯುಕ್ತ ಶ್ರೀಗಳು ಅವರನ್ನು ಸತ್ಕರಿಸಿ ಗೌರವಿಸಿದರು.

