ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ೩೦೦೦ ಬೆಂಬಲ ನಿಗದಿಪಡಿಸಿ ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವುದು ಹಾಗೂ ಹಾನಿಗೊಳಗಾದ ತೊಗರಿಗೆ ಕೂಡಲೇ ಪರಿಹಾರ ಹಣ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಅಂತೂ ವಿಪರೀತ ಮಳೆಯಿಂದ ಸಂಪೂರ್ಣ ಹಾಳಾಗಿ ಹೋಗಿ ರೈತರ ಬದುಕನ್ನೇ ಮೂರಾ ಬಟ್ಟೆ ಮಾಡಿದೆ. ಸರ್ಕಾರ ಇನ್ನು ಬಿಡಿಗಾಸು ಪರಿಹಾರ ಹಣ ರೈತರ ಕೈಗೆ ಸೇರಿಲ್ಲ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಈಗಾಗಲೇ ವಿಜಯಪುರ ಜಿಲ್ಲೆಗೆ ೩೩೩ ಕೋಟಿ ತೊಗರಿ ಬೆಳೆ ಹಾನಿ ಪರಿಹಾರ ಜಮೆಯಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಈಗಾಗಲೇ ನೂರು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದರೂ ಜಿಲ್ಲೆಯ ಯಾವೊಬ್ಬ ರೈತನ ಖಾತೆಗೆ ನಯಾ ಪೈಸೆ ಪರಿಹಾರ ಹಣ ಜಮೆಯಾಗಿರುವುದಿಲ್ಲ. ಹಿಂಗಾರು ಬಿತ್ತನೆಗೆ ಖಾಸಗಿ ಲೇವಾದೇವಿಗಳಿಂದ ಸಾಲ ಪಡೆದು ಬಿತ್ತನೆ ಮಾಡಿದ್ದಾರೆ. ಅವರ ಕಿರುಕುಳವು ಹೆಚ್ಚಾಗಿದೆ ಇಂತಹದರಲ್ಲಿ ಸರ್ಕಾರ ರೈತರ ಮೂಗಿಗೆ ತುಪ್ಪ ಸುರಿಸುವ ಕೆಲಸ ಮಾಡುತ್ತಿದೆ. ಈಗಾಗಲೆ ರೈತರಿಗೆ ತಕ್ಷಣ ತೊಗರಿ ಬೆಳೆ ಹಾನಿ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು. ಹಾಗೂ ರೈತರ ಬೆಳೆದಂತಹ ಮೆಕ್ಕೆಜೋಳಕ್ಕೂ ಯಾವುದೇ ಕಿಮ್ಮತ್ತು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ತೊಗರಿ ಬೆಳೆ ಹಾಳಾದ ರೈತರು ಮೆಕ್ಕೆ ಜೋಳಕ್ಕಾದರೂ ಅಲ್ಪಸ್ವಲ್ಪ ಕೈಗೆ ಹಣ ಬಂದರೆ ವರ್ಷವಿಡಿ ಕುಟುಂಬ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂಬ ಆಶಾಭಾವನದಲ್ಲಿರುವ ರೈತರಿಗೆ ಅದಕ್ಕೂ ಕೂಡ ಸರ್ಕಾರಗಳು ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಪ್ರತಿ ಕ್ವಿಂಟಲ್ ಮೆಕ್ಕೆ ಜೋಳಕ್ಕೆ ೨೪೦೦ ರಂತೆ ನಿಗದಿ ಮಾಡಿದೆ. ಆದರೆ ಇನ್ನು ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ.
ಹೊರಗಡೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟ್‌ಲ್ ಮೆಕ್ಕೆ ಜೋಳಕ್ಕೆ ೧೫೦೦ ರಿಂದ ೧೮೦೦ ರುಪಾಯಿ ಖರೀದಿ ನಡಿದಿವೆ. ಎಮ್.ಎಸ್.ಪಿ ಕಿಂತಲೂ ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೂ ಕೂಡಾರೈತರು ಅನಿವಾರ್ಯವಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದಿದ್ದ ಕಾರಣ ಮಾರುಕಟ್ಟೆಯಲ್ಲಿ ನಿಗದಿ ಪಡಿಸಿದ ದರಕ್ಕೆ ಮೆಕ್ಕೆಜೋಳ ಮಾರಾಟ ಮಾಡಿ ರೈತರು ಸಪ್ಪೆ ಮುಖ ಮಾಡಿಕೊಂಡು ಮನೆಗೆ ತೆರಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಾಡಗೌಡ ಬಿರಾದಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಗನಗೌಡ ಹಿರೇಗೌಡ, ಮಲ್ಲನಗೌಡ ಬಿರಾದಾರ , ಬಸನಗೌಡ ಹಂಜಲಿ, ಶ್ರೀಶೈಲ ಹೂಗಾರ, ಬೀರು ರಾಠೋಡ, ಸತೀಶ ಬಿರಾದಾರ, ಗುರುಸಂಗಪ್ಪಗೌಡ ಬಿರಾದಾರ, ಸೋಮನಗೌಡ ಬಿರಾದಾರ, ಪುಂಡಲೀಕ ಹಂದಿಗನೂರ, ಮುತ್ತಪ್ಪ ದಳವಾಯಿ ಹಜರುದ್ದೀನ ಮುಲ್ಲಾ, ರೇವಣಸಿದ್ಧ ಚವ್ಹಾಣ, ಸಂಗನಗೌಡ ಪಾಟೀಲ, ಖಾಜೇಸಾಬ ವಾಡೇದ, ಆಕಾಶ ಗುಡದಿನ್ನಿ ಮುಂತಾದವರು ಇದ್ದರು.

