ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾತು ಬಾರದ, ಕಿವಿ ಕೇಳದ ಬಡ ಮಕ್ಕಳಿಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟು, ಆ ಮಕ್ಕಳಿಗೆ ಧ್ವನಿಯಾಗಿರುವ ಸುಜಾತ ರೇಶ್ಮಿ ಅವರು ಮಹಾತಾಯಿಯಾಗಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘಿಸಿದರು.
ನಗರದ ಸಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
೨೦೦೯ ರಲ್ಲಿ ಯಾರ ಸಹಾಯವೂ ಇಲ್ಲದೆ ಕೇವಲ ಮೂರು ಮಕ್ಕಳಿಂದ ಆರಂಭಗೊಂಡ ಈ ಶಾಲೆ ಇಂದು ೧೩೦ ಮಕ್ಕಳಿಗೆ ಆಶ್ರಯಧಾಮವಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ತುಂಬ ಕಷ್ಟದ ಕೆಲಸ. ಆದರೆ ಈ ಶಾಲೆಯ ಸಂಸ್ಥಾಪಕಿ ಸುಜಾತ ರೇಶ್ಮಿ ಅವರು ತಾವೇ ಮೂರು ವರ್ಷ ಮೈಸೂರಿನಲ್ಲಿ ಸ್ಪೀಚ್ ಥೆರೆಪಿ ತರಬೇತಿ ಪಡೆದು, ಇಲ್ಲಿಯ ಸುಮಾರು ೨೫ ಶಿಕ್ಷಕರಿಗೆ ತರಬೇತಿ ನೀಡಿ ಪರಿಣಾಮಕಾರಿ ಶಿಕ್ಷಣದೊಂದಿಗೆ ಮಕ್ಕಳಿಗೆ ಊಟ-ವಸತಿಯ ಹೊಣೆಯನ್ನು ಹೊತ್ತು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅವರ ಈ ಸೇವೆ ಭಗವಂತನ ಪೂಜೆಯಷ್ಟೇ ಪವಿತ್ರವಾಗಿದೆ. ಅವರ ಈ ಸೇವಾಕಾರ್ಯದಲ್ಲಿ ಸರಕಾರ ಮತ್ತು ಸಂಘ-ಸಂಸ್ಥೆಗಳು ನೆರವಿನ ಹಸ್ತ ಚಾಚಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಈ ಶಾಲೆಯ ಬೆಳವಣಿಗೆಗಾಗಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ನೆರವಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘವು ರೇಷ್ಮೆ ಕುಟುಂಬದೊಂದಿಗೆ ಸದಾ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಸಂಘದ ಮಾಜಿ ಜಿಲ್ಲಾಧ್ಯಕ್ಷ ಶರಣು ಮಸಳಿ, ಶಾಲೆಯ ಮುಖ್ಯ ಗುರು ಸುಜಾತ ಬಿರಾದಾರ (ರೇಶ್ಮಿ) ಮಾತನಾಡಿದರು.
ಹಿರಿಯ ಪತ್ರಕರ್ತರಾದ ಮಹೇಶ ಶೆಟಗಾರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ರಾಜು ಕೊಂಡಗೂಳಿ, ವಿಠ್ಠಲ ಲಂಗೋಟಿ, ಸಂಸ್ಥೆಯ ಅಧ್ಯಕ್ಷ ಶಿವಾನಂದ ರೇಶ್ಮಿ, ಉಪಾಧ್ಯಕ್ಷ ಪ್ರಬಣ್ಣ ಬಿರಾದಾರ, ಕಾರ್ಯದರ್ಶಿ ಅವಿನಾಶ ಬಿದರಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ರೇಶ್ಮಿ, ರಮೇಶ ರೇಶ್ಮಿ, ಸುನೀಲ್ ಬಿರಾದಾರ, ಸುಧೀರ ರೇಶ್ಮಿ ವೇದಿಕೆ ಮೇಲಿದ್ದರು.
ಶಿಕ್ಷಕಿ ರುಕ್ಮಿಣಿ ಕೋಳಿ ನಿರೂಪಿಸಿ, ವಂದಿಸಿದರು. ಶಿಕ್ಷಕಿ ಹೇಮಾ ಕೆಂಗಸೂರ ಸ್ವಾಗತಿಸಿದರು.
ಗಣ್ಯರಾದ ವಿಶ್ವನಾಥ ರೇಶ್ಮಿ, ಅಭಿಯಂತರ ಪ್ರಶಾಂತ ಸಾಲಿಮಠ, ಚಂದ್ರು ನಿಂಬರಗಿಮಠ, ರಾಜು ಕೆರುಟಗಿ, ಅಜಯ ಕುಲಕರ್ಣಿ ಮತ್ತು ಶಿಕ್ಷಕರಾದ ಆಕಾಶ ರೇಶ್ಮಿ, ಲಕ್ಷ್ಮಿ ಉಕ್ಕಲಿ, ಗಾಯತ್ರಿ ಪತ್ತಾರ, ಲಕ್ಕಮ್ಮ ಎಮ್ಮಿ, ಕಿರಣ್ ಐಹೊಳೆ, ಸೌಮ್ಯ ರೇಶ್ಮಿ, ಶ್ವೇತಾ ಕೊಪ್ಪಳ ಸೇರಿದಂತೆ ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಇದ್ದರು.

ಮನಸೂರೆಗೊಂಡ ಮಕ್ಕಳ ನೃತ್ಯಗಳು
ಹಾಡು ಸಂಗೀತ ತಮಗೆ ಕೇಳದಿದ್ದರೂ ಸಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ತಮ್ಮೆದುರು ಕುಳಿತ ಶಿಕ್ಷಕಿಯ ಸಂಜ್ಞೆಯನ್ನು ಅರ್ಥೈಸಿಕೊಂಡು ಹಾಡು ಮತ್ತು ತಾಳಕ್ಕೆ ತಕ್ಕಂತೆ ಮಾಡಿದ ಸಮೂಹ ನೃತ್ಯಗಳು ಎಲ್ಲರ ಮನಸೂರೆಗೊಂಡವು. ಉಳಿದ ಮಕ್ಕಳಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ತಮ್ಮ ಪ್ರತಿಭೆ ಪ್ರದರ್ಶಿಸಿದ ಮಕ್ಕಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದರು.
ಮಕ್ಕಳ ಈ ಸಾಧನೆ ಅಲ್ಲಿಯ ಶಿಕ್ಷಕ-ಶಿಕ್ಷಕಿಯರ ಮೊಗದಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಅವರ ಕಣ್ಣಂಚು ಹಸಿಯಾಗಿತ್ತು.

ಪ್ರಕಾಶಕಿಯರಿಗೆ ಗೌರವ ಸನ್ಮಾನ
ಸಮಾರಂಭದಲ್ಲಿ ’ಬಿಜಾಪುರ ವಾರ್ತಾ’ ದಿನಪತ್ರಿಕೆ ಪ್ರಕಾಶಕಿ ಶೈಲಜಾ ಬಸವರಾಜ ಬಿದರಿ, ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶೈಲಾ ಇಂದುಶೇಖರ ಮಣೂರ ಹಾಗೂ ರುದ್ರಮ್ಮ ಮುರಿಗೆಪ್ಪ ರೊಳ್ಳಿ ಅವರನ್ನು ಸಂಸ್ಥೆಯ ವತಿಯಿಂದ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಬಿರಾದಾರ (ರೇಶ್ಮಿ) ಸನ್ಮಾನಿಸಿ ಗೌರವಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ, ಸದ್ದಾಂ ಜಮಾದಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಗದ್ದನಕೇರಿ, ಸುರೇಶ ತೆರದಾಳ, ಚಿದಂಬರ ಬಿ. ಕುಲಕರ್ಣಿ, ಸಂಜಯ ಟಿ. ಕೋಳಿ, ಶ್ರೀನಿವಾಸ ಡಿ. ಸೂರಗೊಂಡ, ಗೋಪಾಲ ಜಿ. ಕನಿಮಣಿ, ಶಿವಾನಂದ ಡಿ. ಶಿವಶರಣ ಮತ್ತು ಪ್ರಭು ಕುಮಟಗಿ ಅವರನ್ನು ಸಂಸ್ಥೆಯ ಚೇರಮನ್ ಶಿವಾನಂದ ರೇಶ್ಮಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

