ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆದ್ಯಾತ್ಮಿಕ ಚಿಂತಕರು, ಭಾವೈಕ್ಯದ ಹರಿಕಾರರು, ಸಮಾಜ ಸುಧಾರಕರು, ಲೋಕ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರಿಗೆ ಯಾವ ದೇಶ, ಯಾವ ಊರಾದರೇನೆ? ಗುರಿಯೊಂದೆ ಅವರ ಧ್ಯೇಯವಾಗಿರುತ್ತದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಹೆಬ್ಬಾಳದ ಪರಮಾನಂದರು. ತಮಿಳುನಾಡಿನ ಶಿವಕಂಚಿಯಲ್ಲಿ ಜನಿಸಿದರೂ ಅವರ ನಿಸ್ವಾರ್ಥ ಜೀವನ, ಸಮಾಜ ಸುಧಾರಣೆಯ ತುಡಿತ, ಜೀವನದ ರಹಸ್ಯ, ಆಧ್ಯಾತ್ಮಕ್ಕೆ ಮನಸೋತು ಹಲವಾರು ಜನ ಅವರ ಶಿಷ್ಯರಾದರು. ಪರಮಾನಂದರು ಸುತ್ತಾಡಿದ ಪ್ರದೇಶಗಳಲೆಲ್ಲಾ ದೇಗುಲ ನಿರ್ಮಿಸಿದರು. ಆ ಸಾಲಿನಲ್ಲಿ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿಯೂ ಅವರು ಸುತ್ತಾಡಿದ ಪ್ರತಿತಿ ಇರುವುದರಿಂದ ಪರಮಾನಂದರ ದೇಗುಲ ಇಲ್ಲಿದೆ.
ಛಟ್ಟಿ ಜಾತ್ರೆ ಎಂದೇ ಸಿಂದಗಿ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಚಾಂದಕವಟೆ ಗ್ರಾಮದ ಪರಮಾನಂದರ ಜಾತ್ರೆಯು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಐತಿಹಾಸಿಕ ಹಿನ್ನೆಲೆ ಹಾಗೂ ಆಧ್ಯಾತ್ಮಿಕವಾಗಿ ಬೆಳೆದು ಬಂದಿರುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸೇವನೆ ಮಾಡುತ್ತಾರೆ. ಈ ಮೂಲಕ ಛಟ್ಟಿ ಜಾತ್ರೆ ಜಾತ್ಯಾತೀತವಾಗಿ ಹಾಗೂ ಧಾರ್ಮಿಕವಾಗಿ ಬೆಳೆದು ಬಂದಿದೆ. ಸೋಮುವಾರ ನಡೆದ ಈ ಜಾತ್ರೆಗೆ ಭಕ್ತ ಸಾಗರ ಸಾಕ್ಷಿಯಾಯಿತು ಎಂದು ನಿಂಗರಾಜ ಅತನೂರ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಈ ಛಟ್ಟಿ ಜಾತ್ರೆಯು ಸುಮಾರು ವರ್ಷಗಳಿಂದ ಪ್ರಾರಂಭವಾಗಿ ಸಜ್ಜಿಗಡಬು, ಬಜ್ಜಿ ಪಲ್ಲೆ ಮತ್ತು ಅನ್ನ ಸಾಂಬರ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ ಎಂದು ಮಲ್ಲು ಕಂಠಿಗೊAಡ ಹೇಳಿದರು.
ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಹೂರವಲಯದಲ್ಲಿರುವ ಈ ದೇವಾಲಯಕ್ಕೆ ಛಟ್ಟಿ ಅಂಗವಾಗಿ ಮಧ್ಯಾಹ್ನದ ಸಮಯದಲ್ಲಿ ವಿವಿಧ ಪ್ರದೇಶಗಳಿಂದ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ ಬಳಿಕ ಪ್ರಸಾದ ಸೇವನೆಗೆ ಚಾಲನೆ ನೀಡುತ್ತಾರೆ. ಮಧ್ಯಾಹ್ನದಿಂದ ಸಂಜೆಯವರೆಗೂ ಭಕ್ತರು ಆಗಮಿಸಿ ಸಜ್ಜಿಗಡಬು, ಬಜ್ಜಿಪಲ್ಲೆ, ಅನ್ನ ಸಾಂಬಾರ ಪ್ರಸಾದ ಸೇವನೆ ಮಾಡುತ್ತಾರೆ. ಹಾಗಾಗಿ ಇದು ಛಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ.
ಈ ವೇಳೆ ಗ್ರಾಮಸ್ಥರಾದ ರವಿಕುಮಾರ ಪಾಟೀಲ, ಮಲ್ಲು ಕಂಟಿಗೊಂಡ, ಸುಬಾಸ ಸಿರಕನಳ್ಳಿ, ಬಸು ಗೊಬ್ಬುರ, ಗೊಲ್ಲಾಳ ಚೌಧರಿ, ಸಾಹೇಬಗೌಡ ಪಾಟೀಲ, ನಾಗಪ್ಪ ಕಂಟಿಗೊಂಡ, ಗಿರಿಜಾದರ ಪೂಜಾರಿ, ಬಸು ಪೂಜಾರಿ, ಪಂಡಿತ ಚೌಧರಿ ಗುರು ಕಂಟಿಗೊಂಡ, ಬಸವರಾಜ ರಂಜುಣಗಿ, ಸುರೇಶ ಮೇತ್ರಿ, ದರೆಪ್ಪ ಕಂಟಿಗೊಂಡ ಸೇರಿದಂತೆ ಚಾಂದಕವಟೆ, ಚಟ್ಟರಕಿ, ಸೋಂಪೂರ, ಗಣಿಹಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಛಟ್ಟಿ ಜಾತ್ರೆಯಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾದರು.

ಇಲ್ಲಿಗೆ ಬಂದು ಪರಮಾನಂದರ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸೇವನೆ ಮಾಡಿದರೆ, ರೋಗ ರುಜಿನಗಳು ದೂರಾಗುತ್ತವೆ. ಮನೆಗೆ ಪ್ರಸಾದ ತೆಗೆದುಕೊಂಡು ಹೋಗುವುದರಿಂದ ಮನೆಯಲ್ಲಿ ಸದಾ ಸಮೃದ್ಧಿಯಾಗುತ್ತದೆ ಪರಮಾನಂದರು ಬಂದ ಭಕ್ತರನ್ನು ಹರಸುವ ಕಲ್ಪತರುವಾಗಿದ್ದಾರೆ ಎಂಬುದು ಭಕ್ತರ ನಂಬಿಕೆ.”
– ನಾಗಪ್ಪ ಕಂಠಿಗೊಂಡ
ಕೋಟ್ ೨
“ತಮಿಳುನಾಡಿನ ಶಿಚಕಂಚಿಯಲ್ಲಿ ಜನಿಸಿ ಲೋಕ ಕಲ್ಯಾಣಕ್ಕಾಗಿ ವಿವಿಧ ರಾಜ್ಯ, ಜಿಲ್ಲೆಗಳ ಪ್ರದೇಶಗಳಿಗೆ ಸಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿಯೂ ಆಧ್ಯಾತ್ಮದ ಸಾಧನೆಯನ್ನು ಮಾಡಿದ್ದಾರೆ. ಎಲ್ಲ ಶಿಷ್ಯರು ಭಾವೈಕ್ಯತೆಯ ಹರಿಕಾರರೇ ಆಗಿದ್ದಾರೆ. ಹೊರ ರಾಜ್ಯದ ಅಸಂಖ್ಯೆ ಭಕ್ತಿ ಗಣವನ್ನು ಈ ದೇಗುಲ ಹೊಂದಿದೆ.”
– ಪಂಡಿತ ಚೌಧರಿ
ಗ್ರಾಮಸ್ಥರು

