ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಬ್ಬ ಭಾರತೀಯನು ನಮ್ಮ ರಾಷ್ಟçವನ್ನು ಬಲಿಷ್ಟ ಮತ್ತು ಸಮರ್ಥಗೊಳಿಸಲು ಕೆಲಸ ಮಾಡಬೇಕು. ಒಂದು ಶಕ್ತಿಶಾಲಿ ರಾಷ್ಟçಕ್ಕಾಗಿ ನಾವೆಲ್ಲರು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ರಾಷ್ಟಿçಯ ಯುವಜನೋತ್ಸವ ಸಮಿತಿ ಸದಸ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಜಾವೀದ ಜಮಾದಾರ ಕರೆ ನೀಡಿದರು.
ನಗರದ ಕಂದಗಲ ಹಣಮಂತ್ರಾಯ ರಂಗಮಂದಿರದಲ್ಲಿ ಭಾರತ ಸರ್ಕಾರದ ಯುವಕಾರ್ಯ ಮತ್ತು ಕ್ರೀಡಾ ಮಂತ್ರಾಲಯ ಎನ್.ಎಸ್.ಎಸ್. ಕೇಂದ್ರ ಸಂವನ ಇಲಾಖೆ, ಮೆರಾ ಭಾರತ ಕೇಂದ್ರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸರದಾರ ವಲ್ಲಭಾಯಿ ಪಟೇಲ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಏಕತಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಭಾರತವು ಭಾಷೆ, ಧರ್ಮ ಮತ್ತು ಸಂಸ್ಕೃತಿಯ ವೈವಿದ್ಯತೆಗಳ ಸಮ್ಮಿಲನವಾಗಿದೆ. ಈ ವೈವಿದ್ಯತೆಯೇ ನಮ್ಮ ದೇಶದ ಶಕ್ತಿ. ನಮ್ಮ ಭಿನ್ನತೆಗಳು ಹೊರತಾಗಿಯು ನಾವು ಒಂದು ಪ್ರಗತಿಶೀಲ ರಾಷ್ಟ್ರಕ್ಕಾಗಿ ಒಗ್ಗಟ್ಟಾಗಿ ನಿಲ್ಲಬೇಕು. ಒಗ್ಗಟ್ಟು, ಶಾಂತಿ ಮತ್ತು ಗೌರವದಿಂದ ಕೂಡಿದ ಸಹಬಾಳ್ವೆಯೇ ನಮ್ಮ ದೇಶದ ಬಲ. ಯುವಜನತೆ ದೇಶದ ಅಮೂಲ್ಯ ಸಂಪನ್ಮೂಲ. ಯುವಶಕ್ತಿಯ ಈ ಸಂಪನ್ಮೂಲ ಸದ್ಬಳಕೆಯಾದರೆ ಮಾತ್ರ ದೇಶದ ವಿಕಾಸ ಸಾಧ್ಯ. ಅತೀ ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತ ದೇಶಭಕ್ತಿ, ಭಾವೈಕ್ಯತೆ ಪವಿತ್ರ ಭಾವ ಬೆಳೆಸಿಕೊಂಡು ಮುನ್ನಡೆಯಬೇಕು. ಯುವಜನತೆಯ ದಿಕ್ಕು ತಪ್ಪಿಸಿ ಅವರನ್ನು ಬಯೋತ್ಪಾದನೆ, ಅಪರಾದ, ದೇಶ ದ್ರೋಹ ಚಟುವಟಿಕೆಗಳನ್ನು ತೊಡಗಿಸುವ ದುಷ್ಟಶಕ್ತಿಗಳಿಂದ ಯುವಜನತೆ ಜಾಗೃತರಾಗಬೇಕೆಂದರು.
ವಿದ್ಯಾಭಾರತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಟಗಿ ಮಾತನಾಡಿ, ದೇಶವನ್ನು ಕಟ್ಟಿದ ಮಹಾನ ನಾಯಕರ ಜೀವನವನ್ನು ಮಾರ್ಗದರ್ಶಿಯಾಗಿರಿಸಿಕೊಂಡು ಉತ್ತಮ ಜೀವನ ಮೌಲ್ಯಗಳೊಂದಿಗೆ ಬದುಕನ್ನು ಸಮೃದ್ಧವಾಗಿಸಿಕೊಳ್ಳಬೇಕು. ವಿನಾಕಾರಣ ಸಮಯವನ್ನು ವ್ಯರ್ಥ ಮಾಡದೆ ಸೇವೆ, ಅಧ್ಯಯನದಲ್ಲಿ ಸಮಯವನ್ನು ಬಹುಪಾಲ ಮೀಸಲಿಡಬೇಕು. ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರ ಮುನ್ನಡೆದು ಉತ್ತಮ ಪ್ರಜೆಗಳಾಗಿ ರೂಪಗೊಂಡು ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿ ಮುನ್ನಡೆಯಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಸ್ವಾತಂತ್ರ್ಯ ನಂತರವು ಭಾರತವು ಸುಮಾರು ೫೬೨ ರಾಜರ ರಾಜ್ಯಗಳಾಗಿ ವಿಭಜನೆಯಾಗಿತ್ತು, ಸರ್ದಾರ ವಲ್ಲಭಾಯಿ ಪಟೇಲರ ದೂರದೃಷ್ಟಿ ಮತ್ತು ನಾಯಕತ್ವದಿಂದ ಅವರು ಈ ಎಲ್ಲಾ ರಾಜ್ಯಗಳನ್ನು ಭಾರತ ಒಕ್ಕೂಟದಲ್ಲಿ ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾದರು. ಇದು ಭಾರತದ ಏಕತೆ ಮತ್ತು ಸಾರ್ವಭೌಮತ್ವವನ್ನು ಬಲಪಡಿಸಿತು. ಸರ್ದಾರ ವಲ್ಲಭಾಯಿ ಪಟೇಲರ ಅವರ ಬೋಧನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಪ್ರತಿಜ್ಞೆ ಮಾಡೋಣ ಎಂದರು.
ವೇದಿಕೆಯಲ್ಲಿ ಈರಣ್ಣ ರಾವುರ, ಸಂಜು ಐಹೊಳ್ಳಿ, ಶ್ರೀಧರ ಬಿಜ್ಜರಗಿ, ಎನ್.ಎಸ್.ಎಸ್. ಅಧಿಕಾರಿ ಗಂಗಾಧರ ಅಗಸರ, ಉಮೇಶ ಕೊಳಕೂರ, ಚಿದಾನಂದ ಚಲವಾದಿ, ಎಸ್.ಯು. ಜಮಾದಾರ, ಮಲ್ಲನಗೌಡ ಬಿರಾದಾರ, ನಾಗೇಶ ಡೋಣೂರ ಉಪಸ್ಥಿತರಿದ್ದರು.
ದೇಶದ ಏಕತೆ ಕುರಿತು ಅನೇಕ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈಭವವನ್ನು ನಡೆಸಿಕೊಟ್ಟರು.
ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಜಿಲ್ಲಾ ಯುವ ಅಧಿಕಾರಿ ಗೌರಮ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ಮುಖಂಡ ಮಲ್ಲು ಕಲಾದಗಿ ಸ್ವಾಗತಿಸಿದರು. ಸಮಾಜ ಸೇವಕ ಸುರೇಶ ಬಿಜಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

