೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭ್ರೂಣ ಲಿಂಗ ಪತ್ತೆ ಕಾನೂನಿನ ಪ್ರಕಾರ ಅಪರಾಧ. ಇಂತಹ ಪ್ರಕರಣಗಳ ಸುಳಿವು ಸಿಕ್ಕಲ್ಲಿ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೇ, ಯಾವ ಪ್ರಭಾವಕ್ಕೂ ಒಳಗಾಗದೇ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಕರೆ ನೀಡಿದರು.
ಪಟ್ಟಣದ ಕೆಬಿಎಂಪಿಎಸ್ ಹೈಸ್ಕೂಲ್ ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹ್ಮಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರದಿಗಳ ಪ್ರಕಾರ ಹಲವು ರಾಜ್ಯಗಳಲ್ಲಿ ಹೆಣ್ಣು ಜನನ ಅನುಪಾತ ತಗ್ಗುತ್ತಿರುವದು ಆತಂಕದ ವಿಷಯ. ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತವನ್ನು ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟರೂ ಇನ್ನೂ ಕೆಲವು ಪ್ರದೇಶಗಳಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ನಡೆಯುತ್ತಿರುವದು ಮಹಿಳಾ ಜನಸಂಖ್ಯೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಬರುವ ದಿನಗಳಲ್ಲಿ ಕೇವಲ ಜನಸಂಖ್ಯೆಯ ಅಸಮತೋಲನವಲ್ಲದೇ ವೈವಾಹಿಕ ತೊಂದರೆಗಳು, ಮಹಿಳಾ ದೌರ್ಜನ್ಯಗಳು ಮತ್ತು ಮಾನವ ಮೌಲ್ಯದ ಕುಸಿತಗಳಿಗೆ ಕಾರಣವಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಅವರು ಮಾತನಾಡಿ, ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಹೆಣ್ಣು ಮಗುವಿನ ವಿರುದ್ಧದ ಬೇಧಭಾವ, ಬಾಲ್ಯವಿವಾಹ, ವರದಕ್ಷಿಣೆ ನಿಷೇಧ, ಮತ್ತು ಹಿಂಸೆಯನ್ನು ತಡೆಯಲು ಅನೇಕ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಇನ್ನೂ ಹೆಣ್ಣಿನ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಈ ಶೋಷಣೆ ನಿಲ್ಲಬೇಕಾದರೆ ಜನಜಾಗೃತಿ, ಶಿಕ್ಷಣ ಮತ್ತು ನೈತಿಕ ಬದಲಾವಣೆ ಅತ್ಯವಶ್ಯ. ಒಂದು ಹೆಣ್ಣು ಬಲಿಷ್ಟವಾದರೆ ಕುಟುಂಬ ಬಲಿಷ್ಠವಾಗುತ್ತದೆ. ಕುಟುಂಬ ಬಲಿಷ್ಟವಾದರೆ ರಾಷ್ಟç ಬಲಿಷ್ಠವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಿಮ್ಮ ಸುತ್ತಮುತ್ತ ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯನ್ನು ತಡೆಯಲು ಮುಂದಾಗಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರು ಮಾತನಾಡಿ, ಈ ದಿನಾಚರಣೆ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹೆಣ್ಣುಮಕ್ಕಳು ದುರ್ಬಲರಲ್ಲ. ಮಮತೆಯ ರೂಪದ ನಾಯಕಿಯರು. ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷಿತ ವಾತಾವರಣ ಒದಗಿಸುವದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ-ಅದು ಸಮಾಜದ ಪ್ರತಿ ಸದಸ್ಯರ ಧರ್ಮ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಮಾತನಾಡಿ, ಸಮಾಜದಲ್ಲಿನ ಮೂಢ ನಂಬಿಕೆಗಳಿಂದ ಹೆಣ್ಣಿನ ಸಂತತಿ ಕಡೆಮೆಯಾಗುತ್ತಿದೆ. ಹೆಣ್ಣಿನ ರಕ್ಷಣೆಗಾಗಿ, ಬೆಳವಣಿಗೆಗಾಗಿ ಸರ್ಕಾರ ಸಾಕಷ್ಟು ಕಾಯ್ದೆ-ಕಾನೂನುಗಳನ್ನು ತಂದರೂ ಸಹಿತ ಹೆಣ್ಣಿನ ಮೇಲಿನ ದೌರ್ಜನ್ಯಗಳು ನಿಲ್ಲದಿರುವದು ವಿಷಾಧನೀಯ. ಹೆಣ್ಣು ಬಲಿಷ್ಟವಾಗಿ ಬದುಕಲು ಮುಖ್ಯವಾಗಿ ಅವಳಿಗೆ ಶಿಕ್ಷಣದ ಅವಶ್ಯಕತೆಯಿದೆ. ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ಜ್ಞಾನವಲ್ಲ-ಅದು ಆತ್ಮವಿಶ್ವಾಸದ ಬೆಳಕು ಎಂದರು.
ನ್ಯಾಯವಾದಿ ರಶ್ಮಿ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಖೂಭಾಸಿಂಗ್ ಜಾಧವ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮುಖ್ಯೋಪಾದ್ಯಾಯ ಎಂ.ಎಸ್.ಕವಡಿಮಟ್ಟಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಚಟ್ಟರ ನಿರೂಪಿಸಿದರು.

