ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನಕದಾಸರ ೫೩೮ನೆಯ ಜಯಂತ್ಯುತ್ಸವ ನಿಮಿತ್ತ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ನ.೦೮ರಂದು ಬೆಳಿಗ್ಗೆ ೯ಗಂಟೆಗೆ ಕುಂಭ ಮೇಳದೊಂದಿಗೆ ಕನಕದಾಸರ ಭವ್ಯ ಮೆರವಣಿಗೆ, ೧೦ಗಂಟೆಗೆ ಎತ್ತನ ಗಾಡಿ ಸ್ಪರ್ಧೆ, ೧೧ಗಂಟೆಗೆ ಕುದರಿ ಗಾಡಿ ಸ್ಪರ್ಧೆ, ೧೨ಗಂಟೆಗೆ ಗುಂಡು ಮತ್ತು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ಭಕ್ತ ಕನಕದಾಸ ವೃತ್ತದಲ್ಲಿ ಹಾಗೂ ಮದ್ಯಾಹ್ನ ೩ಗಂಟೆಗೆ ಅಂತರರಾಷ್ಟ್ರೀಯ ಜಂಗಿ ಕುಸ್ತಿ ಪಂದ್ಯಾವಳಿಯು ಪರಮಾನಂದ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ನಾಗಪ್ಪ ಶಿವೂರ ಹೇಳಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟು ಭಾರತ ಕೇಸರಿ ಸಿಕಂದರ ಶೇಖ ಮತ್ತು ಇರಾನ್ ದೇಶದ ಕೇಸರಿ ಮೀರ್ಜಾ ನಡುವೆ ಸೆಣಸಾಟ ನಡೆಯಲಿದೆ. ಇಲ್ಲಿ ೩೦ಜನ ಕುಸ್ತಿಪಟುಗಳ ಮಧ್ಯದಲ್ಲಿ ಜಂಗಿ ಕುಸ್ತಿ ನಡೆಯುವುದು. ಜಂಗಿ ಕುಸ್ತಿಯಲ್ಲಿ ವಿಜೇತರಾದವರಿಗೆ ರೂ.೫ಲಕ್ಷ ಬಹುಮಾನ ನೀಡಲಾಗುವುದು ಎಂದರು.
ಈ ವೇಳೆ ಸಿದ್ದು ಬುಳ್ಳಾ, ತಾಲೂಕು ಕುರುಬ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಮಲ್ಲಿಕಾರ್ಜುನ ಸಾವಳಸಂಗ ಮಾತನಾಡಿ, ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವ ನಿಮಿತ್ತ ಗ್ರಾಮೀಣ ಸೊಗಡಿನ ವಿವಿಧ ಸ್ಪರ್ಧೆಗಳಾದ ಎತ್ತಿನ ಗಾಡಿ, ಕುದುರೆ ಗಾಡಿ, ಗುಂಡು ಮತ್ತು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಎತ್ತಿನ ಗಾಡಿ ಸ್ಪರ್ಧೆಗೆ ರೂ.೫೦,೦೦೧ ಪ್ರಥಮ, ರೂ.೩೦,೦೦೧ ದ್ವಿತೀಯ, ರೂ.೨೦,೦೦೧ ತೃತೀಯ, ಕುದುರೆ ಸ್ಪರ್ಧೆಗೆ ರೂ.೨೧೦೦೧ ಪ್ರಥಮ, ರೂ.೧೫೦೦೧ ದ್ವಿತೀಯ, ರೂ.೧೧೦೦೧ ತೃತೀಯ, ಗುಂಡು ಮತ್ತು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗೆ ರೂ.೧೧೦೦೧ ಪ್ರಥಮ, ೭೫೦೧ ದ್ವಿತೀಯ, ರೂ.೫೦೦೧ ತೃತೀಯ ಬಹುಮಾನ ನೀಡಲಾಗುವುದು. ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ಜಿಲ್ಲೆಯ ಮತ್ತು ತಾಲೂಕಿನ ಎಲ್ಲ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಶ್ರೀಗಳು, ಗೋಳಸಾರದ ಪುಂಡಲಿಂಗ ಶ್ರೀಗಳು, ಯಲಗೋಡದ ಗುರುಲಿಂಗ ಶ್ರೀಗಳು, ಹುಲಿಜಂತಿ ಮಾಳಿಂಗರಾಯ ಪಟ್ಟದದೇವರು, ರಾಂಪೂರದ ಆರೂಢ ಸಂಗನಬಸವೇಶ್ವರ ಶ್ರೀಮಠದ ನಿತ್ಯಾನಂದ ಮಹಾರಾಜರು, ಚಾಂದಕವಟೆಯ ಸಿದ್ದಪ್ಪ ಪೂಜಾರಿ ವಹಿಸಿಕೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ಕುಸ್ತಿ ಉದ್ಘಾಟನೆಯನ್ನು ಮಾಜಿ ಶಾಸಕ ರಮೇಶ ಭೂಸನೂರ, ಸಿದ್ದು ಬುಳ್ಳಾ, ರವಿಕಾಂತ ನಾಯ್ಕೋಡಿ, ಸಂತೋಷ ಪಾಟೀಲ ಡಂಬಳ ನೆರವೇರಿಸುವರು. ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸುವರು. ಎತ್ತಿನ ಗಾಡಿ ಸ್ಪರ್ಧೆಗೆ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಟಿ.ಮಂಜಪ್ಪ, ಗುರುರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಕುದುರೆ ಗಾಡಿ ಸ್ಪರ್ಧೆಗೆ ಮಡ್ಡಪ್ಪ ಹಳ್ಳಿ, ಮಡ್ಡಪ್ಪ ಸೊನ್ನದ ಶ್ರೀಶೈಲ ಬಿಸನಾಳ, ಗುಂಡು ಮತ್ತು ಸಂಗ್ರಾಣಿ ಸ್ಪರ್ಧಗೆ ಚಾಂದಸಾಬ ಬಾಗವಾನ, ಶಿವಪ್ಪ ವಾಲಿಕಾರ, ಬಸವರಾಜ ಬಿರಾದಾರ, ಶರಣಗೌಡ ಕೊಕಟನೂರ, ಸಿದ್ದಪ್ಪ ಪರಗೊಂಡ, ಇಸ್ಮಾಯಿಲ್ ಹೋರಕೇರಿ ಚಾಲನೆ ನೀಡುವರು. ಧ್ವಜಾರೋಹಣವನ್ನು ಬಿ.ಡಿ.ಪಾಟೀಲ ಹಾಗೂ ನಿಂಗಣ್ಣ ಬಿರಾದಾರ ಮಾಡಲಿದ್ದಾರೆ. ವಿಶೇಷ ಆವ್ಹಾನಿತರಾಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ಪಿಎಸ್‌ಐ ಆರೀಫ್ ಮುಷಾಪುರ ಬರಲಿದ್ದಾರೆ. ಧರ್ಮಣ್ಣ ಹಿರೇಕುರುಬರ ಸೇರಿದಂತೆ ವಿವಿಧ ಗಣ್ಯರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಣ್ಯರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಸಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ಬಿತ್ತಿಪತ್ರಗಳನ್ನು ನಾಗಪ್ಪ ಶಿವೂರ ಹಾಗೂ ಸಮಾಜದ ಬಾಂಧವರು ಬಿಡುಗಡೆಗೊಳಿಸಿದರು.
ಈ ವೇಳೆ ಸಿದ್ದು ಕರಿಗೊಂಡ, ಪಂಡಿತ ಚೌಧರಿ, ಪ್ರಕಾಶ ಅಡವಿ, ವಿಠ್ಠಲ ನಾಯ್ಕೋಡಿ ಸೇರಿದಂತೆ ಸಮಾಜ ಬಾಂಧವರು ಇದ್ದರು.

