ಇಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಪಠ್ಯದ ಲೇಖಕರೊಂದಿಗೆ ಸಂವಾದ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕನ್ನಡ ನೆಲದ ಆಸ್ಮಿತೆಯನ್ನು ಗಡಿಭಾಗದ ಶಾಲಾಕಾಲೇಜುಗಳು ನಿರ್ವಹಿಸುತ್ತಿರುವುದು ಅತ್ಯಂತ ಸಮಾಧಾನಕರ ಸಂಗತಿ, ಕನ್ನಡತನ ಮರೆತು ಹೋಗುವ ವಿಷಾಧದ ದಿನಗಳಿವು ಎಂದು ಬೆಂಗಳೂರು ಜೈನ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರಾಜಕುಮಾರ ಬಡಿಗೇರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ” ಪಠ್ಯದ ಲೇಖಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಓದು ಮತ್ತು ಬರಹವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ನಡೆಯಬೇಕಾದ ಸಂಗತಿಯಾಗಿದ್ದು, ಲೇಖಕರೊಂದಿಗೆ ವಿದ್ಯಾರ್ಥಿಗಳು ಬೆರೆಯುವ ಮತ್ತು ಪಠ್ಯದ ಜೊತೆಗೆ ಸಾಂಸ್ಕೃತಿಕ ಮುಖಾಮುಖಿಯಾಗುವ ಕೆಲಸ ಇಲ್ಲಿ ನಡೆಯುತ್ತಿರುವುದು ಮಾದರಿಯಾಗಿ ನಾಡಿನ ಶೈಕ್ಷಣಿಕ ವಲಯಗಳಲ್ಲಿ ಅನುಸರಿಸಬೇಕಾದ ಮಹತ್ವದ ಕಾರ್ಯವೆಂದು ಬಣ್ಣಿಸಿದರು.
ಪಠ್ಯದ ಲೇಖಕ ಡಾ.ಪ್ರಕಾಶ ಖಾಡೆ ಮಾತನಾಡಿ ‘ ಪಠ್ಯ ಮತ್ತು ಕವಿ’ ಸಮಪಾತಳಿಯ ಭಿನ್ನ ಆಲೋಚನೆಯ ಭಾಗವಾಗಿರುತ್ತಾನೆ, ಸದಾ ಪಠ್ಯದ ಒಂದು ಭಾಗವಾಗಿ ನೆಲೆಯೂರಿರುತ್ತಾನೆ ಎಂದರು.
ಇನ್ನೊಬ್ಬ ಕತೆಗಾರ, ಬಿಎ 3ನೇ ಸೆಮ್ ಪಠ್ಯದ ಲೇಖಕ ಶಂಕರ ಬೈಚಬಾಳ ಮಾತನಾಡಿ ‘ಲೇಖಕರ ಮುಖಾಮುಖಿಯಾಗೋದು ಅಂದ್ರೆ ಒಂದು ಸಾಂಸ್ಕೃತಿಕ ಚಿಂತನೆಯ ವ್ಯಕ್ತಿತ್ವದ ಅನಾವರಣವೂ ಆಗುತ್ತದೆ, ಲೇಖಕನ ಬದುಕು ಬವಣೆಗಳನ್ನು. ಪಠ್ಯರಚನೆಯ ಹಿನ್ನೆಲೆಯನ್ನು ತಿಳಿದುಕೊಳ್ಳುವ, ಸಾಹಿತ್ಯಕ ಅಂಶಗಳನ್ನು ಅಳವಡಿಕೆಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎಂದರು.
ಆಸಕ್ತಿದಾಯಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಪ್ರತಿಕ್ರಿಯೆಯನ್ನು ಉಭಯ ಲೇಖಕರು ನೀಡಿದರು. ಪಠ್ಯ ರಚನೆಯ ಉದ್ದೇಶ, ರಚನೆಯ ಹಿನ್ನಲೆ, ಪಠ್ಯದ ಆಶಯ ಮೊದಲಾದ ವಿಚಾರಗಳನ್ನು ಸಂವಾದ ಮಾಡುವ ಮೂಲಕ ವಿದ್ಯಾರ್ಥಿಗಳು ತಿಳಿದುಕೊಂಡರು. ಪ್ರಸ್ತುತ ಬಿಎ 3ನೇ ಸೆಮ್ ಕನ್ನಡ ಪಠ್ಯದ ಸಂಪಾದಕ ಡಾ. ರಮೇಶ ಕತ್ತಿ ಸಂವಾದವನ್ನು ಅಚ್ಚುಕಟ್ಟಾಗಿ ಸಮನ್ವಯಗೊಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಆರ್.ಎಚ್. ಮಾತನಾಡಿ ‘ ಲೇಖಕರನ್ನು ಕರೆಯಿಸಿ ಅವರ ಪಾಠವನ್ನು ಅವರಿಂದಲೇ ಮಾಡಿಸೋದು ಮತ್ತು ಲೇಖಕನನ್ನು ಕಾಣುವ ಭಾಗ್ಯ ಕನ್ನಡ ವಿಭಾಗ ಮಾಡಿದೆ ಎಂದು ಶ್ಲಾಘಿಸಿದರು.
ಅಕ್ಕಮಹಾದೇವಿ ಮಹಿಳಾವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಮಾಡ್ಯಾಳ ವೇದಿಕೆಯಲ್ಲಿದ್ದರು.
ಡಾ.ರಮೇಶ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸಂಗಮೇಶ ಹಿರೇಮಠ ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕ ಪ್ರೊ. ರವಿ ಅರಳಿ ವಂದಿಸಿದರು. ಪ್ರೊ. ನಂದಕುಮಾರ ಬಿರಾದಾರ ನಿರೂಪಿಸಿದರು.

