ವಿಜಯಪುರ: ಎರಡು ತಿಂಗಳಲ್ಲಿ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಿ, ಫಲಾನುಭವಿಗಳು ವಾಸಿಸಲು ಅನುಕೂಲ ಮಾಡಿಕೊಡಬೇಕು ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಗಡುವು ನೀಡಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ನಮೋ ನಗರದಲ್ಲಿ ನಿರ್ಮಾಣ ಆಗುತ್ತಿರುವ ಆಶ್ರಯ ಮನೆಗಳ ಕಾಮಗಾರಿಯನ್ನು ಶನಿವಾರ ವೀಕ್ಷಣೆ ಮಾಡಿದ ಶಾಸಕರು, ತ್ವರಿತಗತಿಯಲ್ಲಿ ಬಾಕಿ ಕಾಮಗಾರಿ ಮುಗಿಸುವ ಜೊತೆಗೆ ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಎರಡು ದಿನಕ್ಕೊಮ್ಮೆ ಭೇಟಿ ನೀಡಿ, ಪರಿಶೀಲಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಮೊದಲ ಹಂತದಲ್ಲಿ ೧೪೯೩ ಮನೆಗಳು ನಿರ್ಮಾಣ ಆಗುತ್ತಿದ್ದು, ಇವು ಮುಗಿದ ಬಳಿಕ ಎರಡನೇ ಹಂತದಲ್ಲಿ ಇನ್ನೂ ೨೨೫೦ ಮನೆಗಳು ನಿರ್ಮಾಣವಾಗಲಿವೆ. ಹೀಗಾಗಿ ಬೇಗ ಬೇಗ ಕಾಮಗಾರಿ ಮುಗಿಸಬೇಕು. ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆ ಆಗದಂತೆ ಒಳ ಚರಂಡಿ, ಕುಡಿಯುವ ನೀರಿನ ಸಂಪರ್ಕ, ರಸ್ತೆ ಅಭಿವೃದ್ಧಿ ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು, ಶಾಲೆ, ಉದ್ಯಾನ, ಆರೋಗ್ಯ ಕೇಂದ್ರ, ಗ್ರಂಥಾಲಯ ವ್ಯವಸ್ಥೆ ಸಹ ಇಲ್ಲಿ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದೀನ್ ಸೌದಾಗಾರ ಸೇರಿದಂತೆ ಎಂಜಿನಿಯರರು, ಗುತ್ತಿಗೆದಾರರು, ಅಧಿಕಾರಿಗಳು ಇದ್ದರು.


