ದೇವರಹಿಪ್ಪರಗಿ: ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ ರೈತ ಸಮುದಾಯದ ನೆರವಿಗೆ ಧಾವಿಸುವಂತೆ ಆಗ್ರಹಿಸಿ ಮುಳಸಾವಳಗಿ, ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕಾಲುವೆಯಲ್ಲಿ ಧರಣಿ ಕುಳಿತು ವಿನೂತನ ಪ್ರತಿಭಟನೆ ಕೈಗೊಂಡರು.
ಮತಕ್ಷೇತ್ರದ ಇಂಗಳಗಿ, ನಿವಾಳಖೇಡ, ಮುಳಸಾವಳಗಿ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಗ್ರಾಮಗಳು ರೈತರು ಇಂಡಿ ರಸ್ತೆಯಲ್ಲಿನ ನಾಗಠಾಣ ಉಪಕಾಲುವೆಗೆ ತೆರಳಿ ಸುಡು ಬಿಸಿಲಿನಲ್ಲಿ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಬಸನಗೌಡ ಬಿರಾದಾರ(ಭೈರೋಡಗಿ), ಬಸವರಾಜ ಕಲ್ಲೂರ(ಮುಳಸಾವಳಗಿ), ಶಿವಶಂಕರ ರೂಗಿ(ಚಿಕ್ಕರೂಗಿ), ರಮೇಶ ದೇಸಾಯಿ(ನಿವಾಳಖೇಡ) ಮಾತನಾಡಿ, ಚಿಮ್ಮಲಗಿ ಕಾಲುವೆಯ ಎನ್‌ಬಿಸಿ, ಕೆಬಿಸಿ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಕಳೆದ ಎರಡು ತಿಂಗಳುಗಳಿಂದ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ಈ ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು ಜಾನುವಾರ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಪರಿತಪ್ಪಿಸುವಂತಾಗಿದೆ.
ಜಿಲ್ಲೆಯ ಮುಳವಾಡ, ಗುತ್ತಿ ಬಸವಣ್ಣ ಕಾಲುವೆ ಸೇರಿದಂತೆ ಎಲ್ಲ ಕಾಲುವೆಗಳಲ್ಲಿ ನಿರಂತರ ನೀರು ಹರಿಸಲಾಗಿದೆ ಆದರೆ ಚಿಮ್ಮಲಗಿ ಕಾಲುವೆಯನ್ನು ಸಂಪೂರ್ಣ ಮರೆಯಲಾಗಿದೆ. ಯಾಕೆ ಈ ತಾರತಮ್ಯ ಎಂದು ಪ್ರಶ್ನೀಸಿ, ಕಳೆದ ತಿಂಗಳು ಈ ಭಾಗದ ರೈತರು ಖುದ್ದಾಗಿ ಶಾಸಕರಲ್ಲಿಗೆ ತೆರಳಿ ಮನವಿ ಮಾಡಿದ್ದರು. ನಂತರ ತಹಶೀಲ್ದಾರ ಕಚೇರಿಯ ಎತ್ತು, ಚಕ್ಕಡಿಗಳೊಂದಿಗೆ ಮುಂದೆ ಧರಣಿ ಕುಳಿತು ನೀರಿಗಾಗಿ ಆಗ್ರಹಿಸಿ ಮನವಿ ಮಾಡಿದರು. ನಂತರ ರೈತರೆಲ್ಲಾ ಸೇರಿ ಜಾಯವಾಡಗಿಗೆ ತೆರಳಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಆದರೂ ಈವರೆಗೆ ಕಾಲುವೆಗೆ ನೀರು ಹರಿಯದೇ ಇದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ. ಹೀಗೆ ಮುಂದಿನ ಎರಡು ದಿನಗಳಲ್ಲಿ ನೀರು ಹರಿಸದೇ ಇದ್ದರೆ ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಶಂಕರಗೌಡ ಪಾಟೀಲ, ಬಸವರಾಜ ಮಸೂತಿ, ಲಕ್ಷ್ಮಣ ನಿಡಗುಂದಿ, ಲಕ್ಷ್ಮಣ ದಳವಾಯಿ(ನಿವಾಳಖೇಡ) ಸಾಹೇಬಗೌಡ ಬಿರಾದಾರ, ಈರಣ್ಣ ಏಳಗಿ, ಪರಸಪ್ಪ ಪೂಜಾರಿ, ಸಾಹೇಬಗೌಡ ಬೂದಿಹಾಳ, ಶಂಕರಗೌಡ ಕೊಕಟನೂರ, ಗುರಣ್ಣ ಕುಂಬಾರ, ಮುದುಕಪ್ಪ ಚವ್ಹಾಣ ಭೀರು ಪೂಜಾರಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
ನಾಗಠಾಣ ಉಪಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಕಾಲುವೆಯಲ್ಲಿ ಧರಣಿ
Related Posts
Add A Comment