ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕನ್ನಡಪರ ಸೇರಿದಂತೆ ಪಟ್ಟಣದ ಎಲ್ಲ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಶರಣ ಸಾಹಿತ್ಯ, ಚುಟುಕು ಸಾಹಿತ್ಯ ಪರಿಷತ್‌ಗಳು, ದಲಿತಪರ ಸಂಘಟನೆಗಳ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಪ್ರಮುಖರು ಹಾಗೂ ವಿವಿಧ ರಂಗಗಳ ಸಾಧಕರು ಸೇರಿದಂತೆ ನಿವೃತ್ತ ಯೋಧರನ್ನು ಸನ್ಮಾನಿಸುವುದರ ಮೂಲಕ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶಿಷ್ಟವಾಗಿ ಆಚರಿಸೋಣ ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದು ಮೇಲಿನಮನಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಾರ್ಯದರ್ಶಿ ಜಿ.ಪಿ.ಬಿರಾದಾರ, ಬಸವಶರಣ ಸೇವಾ ಸಮೀತಿ ಅಧ್ಯಕ್ಷ ಸಂಗಪ್ಪಣ್ಣ ತಡವಲ್, ನಿವೃತ್ತ ಸೈನಿಕರಾದ ರಾಮಪ್ಪ ಎಲ್.ಕೆ. ಬಸವರಾಜ ಕುಂಬಾರ, ಕರವೇ ಸಂಘಟನೆಯ ಚಂದ್ರಶೇಖರ ದಾನಗೊಂಡ, ಶಿವರಾಜ ತಳವಾರ, ವಿಜಯಕುಮಾರ ಯಂಭತ್ನಾಳ, ಬಿಸಿಎಮ್ ಅಧಿಕಾರಿ ರವಿ ಬಂಥನಾಳ, ರಮೇಶ ಬಿರಾದಾರ, ಸಚೀನ ಉಟಗಿ, ಸುಭಾಸ ಸಜ್ಜನ, ಭವಾನಿ ಪಾಟೀಲ, ಗುರುನಾಥ ಮುರುಡಿ, ರಾವುತ ತಳಕೇರಿ, ರಾಜು ಸಿಂದಗೇರಿ, ಸಂಗಮೇಶ ಗ್ವಾಳೇದ, ಚನ್ನಬಸು ಹೊಸಮನಿ, ಅನೀಲ ರಾಠೋಡ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಸಿಬ್ಬಂದಿ ಇದ್ದರು.