ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸ್ವಉದ್ಯೋಗದ ವಿಪುಲ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಎಂದು ರೂಸಾ ಘಟಕದ ಹಿರಿಯ ನೋಡ್‌ಲ್ ಅಧಿಕಾರಿ ಪ್ರೊ. ಗಂಗಾಧರ ಸೋನಾರ ಹೇಳಿದರು.
ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಪ್ರಧಾನಮಂತ್ರಿ ಉಚ್ಛ ಶಿಕ್ಷಾ ಅಭಿಯಾನದ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ “ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮೂಲಕ ಮಹಿಳಾ ಉದ್ಯಮಿಗಳ ಸಬಲೀಕರಣ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ಬೆಳೆಗಳು ಬೆಳೆಯುತ್ತವೆ. ಅವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದಾಗಿದ್ದು, ಮಹಿಳೆಯರು ಸ್ವಾವಲಂಬಿ ಜೀವನಕ್ಕಾಗಿ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಆಯ್ದುಕೊಳ್ಳಬಹುದಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಬಸವರಾಜ ಮೇಟಿ ಮಾತನಾಡಿ, ಆಹಾರೋದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ವೃತ್ತಿ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಸೀತಾಫಲ ಮತ್ತು ಪೇರು ಹಣ್ಣಿನ ಮೌಲ್ಯವರ್ಧನೆ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪಲಂದು ರೈತ ಉತ್ಪಾದಕ ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿದ್ದು ಪೂಜಾರಿ ಮಾತನಾಡಿ, ಮಹಿಳೆಯರು ಆಹಾರೋದ್ಯಮವನ್ನು ಸ್ಥಾಪಿಸಲು ಭಾರತ ಸರ್ಕಾರದಿಂದ ನೀಡಲಾಗಿರುವ ವಿವಿಧ ಯೋಜನೆಗಳು, ಅವುಗಳಲ್ಲಿ ಲಭ್ಯವಿರುವ ಹಣಕಾಸಿನ ನೆರವು ಹಾಗೂ ಇತರ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತರ ವಿದ್ಯಾರ್ಥಿನಿಯರು, ಮತ್ತಿತರು ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕ ಡಾ. ನಟರಾಜ ದುರ್ಗಣ್ಣವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಉನ್ನತ ಶಿಕ್ಷಣ ಅಭಿಯಾನದ ಕೌಶಲ್ಯಾಭಿವೃದ್ಧಿ ಯೋಜನೆಯ ಉದ್ದೇಶ ಹಾಗೂ ಕಾರ್ಯಾಗಾರದ ಕುರಿತಾಗಿ ಮಾಹಿತಿ ನೀಡಿದರು. ಡಾ. ಸವಿತಾ ಹುಲಮನಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯ ಅನುಷಾ ಠಕ್ಕನ್ನವರ ನಿರೂಪಿಸಿದರು.