ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಶನಿವಾರ ದಿಢೀರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕಾರ್ಯವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಅ.೭ರ ಶನಿವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ ವೈದ್ಯೋಪಚಾರ ಕುರಿತು ರೋಗಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಸಿಬ್ಬಂದಿಗಳ ಹಾಜರಾತಿಯನ್ನು ವೀಕ್ಷಣೆ ನಡೆಸಿ, ತಡವಾಗಿ ಬಂದ ಸಿಬ್ಬಂದಿಗಳ ಹಾಜರಾತಿನ್ನು ಗೈರುಹಾಜರಿ ಎಂದು ಪರಿಗಣಿಸಿ ಅಂತಹ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಅವರು, ಕಚೇರಿಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸಬೇಕು. ಜಿಲ್ಲಾ ಮನೋರೋಗ ಘಟಕ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿರುವುದರಿಂದ ಈ ಘಟಕವನ್ನು ಅಡಕಿಗಲ್ಲಿಯಲ್ಲಿರುವ ಆಯುಷ್ ಇಲಾಖೆಯ ಕಟ್ಟಡದಲ್ಲಿ ಸ್ಥಳಾಂತರಿಸಲು ಕ್ರಮ ವಹಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ವಿಜಯಪುರದ ಆಯುಷ್ ಪಂಚಕರ್ಮ ಘಟಕವು ಇತರ ಘಟಕಗಳಿಗೆ ಮಾದರಿಯಾಗಬೇಕು ಆ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು. ವಿಜಯಪುರದಲ್ಲಿ ಈ ಘಟಕ ಕಾರ್ಯನಿರ್ವಹಿಸುತ್ತಿರುವ ಕುರಿತು ಹಾಗೂ ಘಟಕದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವಂಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ|| ರಾಮನಗೌಡ ಎಸ್ ಪಾಟೀಲ, ಆರ್.ಸಿ.ಎಚ್. ಡಾ.ಕೆ.ಡಿ.ಗುಂಡಬಾವಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕವಿತಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಸಿ ಟಿ.ಭೂಬಾಲನ್ & ಸಿಇಓ ರಾಹುಲ ಶಿಂಧೆ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ-ಪರಿಶೀಲನೆ
Related Posts
Add A Comment