
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕನಲ್ಲಿ ನಡೆದ ನಾನು ವಿಜ್ಞಾನಿ-2025 ಟೆಲಿಸ್ಕೋಪ್ ತಯಾರಿಕೆ ಕಾರ್ಯಾಗಾರದಲ್ಲಿ ಪ್ರಥಮ ಫೌಂಡೇಶನ್ ವಿಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ತಾಲ್ಲೂಕಿನ ಹೊನವಾಡದ ಸರ್ಕಾರಿ ಶಾಲೆಯ ಎಂಟನೇ ತರಗತಿ ಮತ್ತು ಪಿಯುಸಿ ತರಗತಿಯ ಗ್ರಾಮದ ಏಳು ವಿದ್ಯಾರ್ಥಿಗಳು ಕೇವಲ 45 ನಿಮಿಷದಲ್ಲಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ( ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್) ನಿರ್ಮಿಸಿದ್ದಾರೆ.
ವಿಧ್ಯಾರ್ಥಿಗಳಾದ ವಿಠ್ಠಲ ನರಳೆ, ಚಂದ್ರಕಾಂತ್ ತುಪ್ಪದ, ಪ್ರಥಮ ಖಂಡೆಕರ, ಶಾಂತಾ ತುಪ್ಪದ, ಪ್ರತಿಕ್ಷಾ ಜನಗೊಂಡ, ಪ್ರತಿಜ್ಞಾ ಜನಗೊಂಡ ಅಶ್ವಿನಿ ರಾಮತೀರ್ಥ ಪ್ರಶಸ್ತಿ ಪತ್ರ ಸ್ವೀಕರಿಸಿದರು.
ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಂಗಳವಾರ ತಮ್ಮ ಕಛೇರಿಗೆ ಬರಮಾಡಿಕೊಂಡು ಮಕ್ಕಳಿಗೆ ಸನ್ಮಾನಿಸಿ ಹಲವಾರು ವೈಜ್ಞಾನಿಕ ಪ್ರಶ್ನೆಗಳನ್ನು ಕೇಳಿ ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳು ತಯಾರಿಸಿದ ಅತ್ಯಾಧುನಿಕ ನ್ಯೂಟಾನಿಯನ ದೂರದರ್ಶಕ ಕಂಡು ಎಲ್ಲರನ್ನು ಬಿಇಓ ಕಛೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೊನವಾಡದ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಹೊನವಾಡದ ಪ್ರತಿಭೆಗಳು ಎಪಿಜೆ ಅಬ್ದುಲ್ ಕಲಾಂರಂತೆ ದೂರ ದೃಷ್ಟಿಯುಳ್ಳವರಾಗಲೆಂದು ನಮ್ಮೂರಿನ ಹೆಮ್ಮೆಯ ಮಾರ್ಗದರ್ಶಿ ಶಿಕ್ಷಕರಾದ ಭೀರಪ್ಪ ವಿಠ್ಠಲ ಖಂಡೇಕಾರ ಅವರು ಹದಿನೈದು ವರ್ಷದ ಪರಿಶ್ರಮ ಸಾರ್ಥಕ ಗೊಂಡಿದೆ. ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಹಸಿದವರ ಹೊಟ್ಟೆಗೆ ಬಿದ್ದ ಅನ್ನ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕ ಅಧ್ಯಕ್ಷ ಎಸ್. ಜಿ. ಲಕ್ಕುಂಡಿಮಠ ಮಾತನಾಡಿ ಟೆಲಿಸ್ಕೋಪ್ ತಯಾರಿಕಾ ಕಾರ್ಯಾಗಾರದ ಲಾಭವನ್ನು ಜಿಲ್ಲೆಯ ಎಲ್ಲಾ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯಾದ್ಯಂತ ಹೊನವಾಡದ ಪ್ರತಿಭೆಯನ್ನು ಪರಿಚಯಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಮಾಡುವಂತೆ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ವಿ. ಬುರ್ಲಿ ಕಾರ್ಯದರ್ಶಿ ರಾಘವೇಂದ್ರ ಮೀಸಾಳೆ, ನಿರ್ದೇಶಕ ಧರೆಪ್ಪಾ ಕಿಲಾರಿ, ಪ್ರಥಮ ಫೌಂಡೇಶನ ಅಧ್ಯಕ್ಷ ಬೀರಪ್ಪ ವಿಠ್ಠಲ ಕಂಡೇಕಾರ, ಬಿ.ಕೆ. ಬಿರಾದಾರ, ಶಂಕರ ನರಳೆ, ಸಂದೀಪ್ ದೇಶಪಾಂಡೆ, ಶಿಕ್ಷಣ ಸಂಯೋಜಕ ಜಿ. ಟಿ. ಕಾಗವಾಡ ಇದ್ದರು.