ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿ ಗಾಪಂ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಜಿಲ್ಲಾಡಳಿತ ಹಾನಿಗೊಳಗಾದ ರೈತರ ಪಟ್ಟಿ ಲಗತ್ತಿಸಬೇಕು. ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ಮಾಡಿದರೆ ಕಾನೂನು ಮೀರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕೂಡಲೇ ಬೇಡಿಕೆಗಳು ಈಡೇರಿಕೆ ಮಾಡದೇ ಹೋದಲ್ಲಿ ಗ್ರಾಮ, ಹೋಬಳಿ, ತಾಲೂಕು ಕೇಂದ್ರಗಳಲ್ಲಿರುವ ಕಛೇರಿಯ ಮುಂಭಾಗ ಹಾಗೂ ಮುಖ್ಯ ರಸ್ತೆಗಳನ್ನು ತಡೆದು ಬೇಡಿಕೆ ಈಡೇರಿಕೆ ಮಾಡುವವರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.
ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ೪ನೆಯ ದಿನದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಆಲಮೇಲ ಮತ್ತು ಸಿಂದಗಿ ತಾಲೂಕುಗಳ ರೈತರು ಬೆಳೆದ ಸಾವಿರಾರು ಹೆಕ್ಟ್ರ ಪ್ರದೇಶದ ಬೆಳೆಯನ್ನು ಪ್ರಕೃತಿ ವಿಕೋಪದಿಂದ ಸಂಪೂರ್ಣ ನಷ್ಟವೆಂದು ಘೋಷಿಸಿ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರಕಾರಕ್ಕೆ ಕೂಡಲೇ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿದರು.
ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಈಗಾಗಲೇ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡು ತಂತ್ರಾಂಶದಲ್ಲಿ ಸೇರಿಸುವ ಕಾರ್ಯವನ್ನು ಪ್ರಾರಂಭವನ್ನು ಮಾಡಿದೆ ಅ.೨೪ರೊಳಗೆ ಪೂರ್ಣಗೊಳಿಸಿ ಸರಕಾರಕ್ಕೆ ವರದಿಯನ್ನು ನೀಡಲಾಗುವುದು. ಕಾರ್ಖಾನೆಗಳ ಮಾಲೀಕರ ಸಭೆಯನ್ನು ಶೀಘ್ರವೇ ಕರೆದು ಅಲ್ಲಿ ಕಬ್ಬಿನ ಬೆಳೆಗೆ ೪೫೦೦ ರೂ. ಬೆಲೆ ನಿಗದಿಪಡಿಸುವ ಕುರಿತ ವಿಷಯ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಇನ್ನುಳಿದ ೫ ಬೇಡಿಕೆಗಳು ರಾಜ್ಯ ಮಟ್ಟದ ಬೇಡಿಕೆಗಳಾಗಿರುವುದರಿಂದ ಸರಕಾರಿ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿ ಅವುಗಳ ಪರಿಹಾರಕ್ಕೂ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿ ಧರಣಿ ಹಿಂಪಡೆಯಲು ಮನವೊಲಿಸುವಲ್ಲಿ ಸಫಲರಾದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಎಂ.ಎಸ್.ಮಠ, ಬಿ.ಎಚ್.ಬಿರಾದಾರ, ಅಶೋಕ ಅಲ್ಲಾಪುರ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಗುರು ತಳವಾರ, ಖಾಜು ಬಂಕಲಗಿ, ಬಸವರಾಜ ಸಜ್ಜನ, ಅಶೋಕ ನಾರಾಣಪೂರ, ಮಲ್ಲಿಕಾರ್ಜುನ ಸಾವಳಸಂಗ, ಪ್ರಶಾಂತ ಕದ್ದರಕಿ, ಬಸವರಾಜ ಐರೋಡಗಿ, ಸಿದ್ರಾಮ ಆನಗೊಂಡ, ಶ್ರೀಕಾಂತ ಬಿಜಾಪೂರ, ಶಿಲ್ಪಾ ಕುದರಗೊಂಡ, ಮಲ್ಲು ಬಗಲಿ,ಎಸ್.ಎನ್.ಹಿರೇಮಠ, ಸೇರಿದಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ತಾಲೂಕಿನ ರೈತರು ಇದ್ದರು.