ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಮೂಲಕ ಸಬಲೀಕರಣದತ್ತ ಸಾಗಬೇಕು ಎಂದು ಮಹಿಳಾ ವಿವಿಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವೈ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ತಿಕೋಟಾ ಗ್ರಾಮದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಮಾತನಾಡಿ, ಗ್ರಾಮೀಣ ಮಹಿಳೆಯರು ಸಕಲ ಕೌಶಲ್ಯಗಳನ್ನು ಹೊಂದಿದ್ದು, ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸುಮನ ಕೋಲ್ಹಾರ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ಮಹಿಳೆಯ ರಾಜಕೀಯ ಸಬಲೀಕರಣಕ್ಕಾಗಿ ಮೀಸಲಾತಿಯ ಅಸ್ತçವನ್ನು ಸಮರ್ಥವಾಗಿ ಉಪಯೋಗಿಸಬೇಕು. ಅಧಿಕಾರದಲ್ಲಿ ಇರುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಪ್ರಯೋಗಿಸಿದಾಗ ಮಾತ್ರ ಗ್ರಾಮಗಳ ಹಾಗೂ ಮಹಿಳಾ ಸಮುದಾಯದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸೆಲ್ಕೊ ಸೊಲಾರ್ ಲೈಟ್‌ನ ಪ್ರತಿನಿಧಿ ಸಂತೋಷ ಹಿಟ್ನಳ್ಳಿ ಸೌರಶಕ್ತಿಯ ಉಪಯೋಗ ಮತ್ತು ಸರ್ಕಾರ ನೀಡುತ್ತಿರುವ ವಿವಿಧ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಿಕೋಟಾ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ಕೋಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷೆ ಭಾಗೀರಥಿ ತೇಲಿ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷೆ ರಿಯಾನಾ ಜಮಖಂಡಿ ಮತ್ತು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಮಹಿಳಾ ಅಧ್ಯಯನ ಕೇಂದ್ರದ ಸಿಬ್ಬಂದಿಗಳಾದ ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ.ಸರೋಜಾ ಸಂತಿ ಪರಿಚಯಿಸಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ರುಕ್ಷಿಣಿ ಅಗಸರ ವಂದಿಸಿದರು.