ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ ಮತ್ತು ಸಜ್ಜಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಲಿಂಬೆ ಹಾಗೂ ಬಾಳೆ ನೀರು ನಿಂತು ಹಾಳಾಗಿವೆ. ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ ೧೫ದಿನದೊಳಗಾಗಿ ಜಿಲ್ಲೆಯ ಎಲ್ಲರಿಗೂ ರೈತರಿಗೆ ಪರಿಹಾರ ಬರಲೇಬೇಕೆಂದು ರೈತ ಸಂಘ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ರೈತರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ ೫೦,೦೦೦ ಹಾಗೂ ನೀರಾವರಿ ಭೂಮಿಗೆ ೧ಲಕ್ಷ ರೂ., ಬಹುವಾರ್ಷಿಕ ಬೆಳೆಗಳಿಗೆ ೨ಲಕ್ಷ ಪರಿಹಾರವನ್ನು ಕೊಡಬೇಕೆಂದು ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಎಲ್ಲ ಬೆಳೆಗಳು ನಷ್ಟಗೊಂಡಿರುವ ಹಿನ್ನೆಲೆಯಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ಪರಿಹಾರವನ್ನು ಹಾಕಬೇಕು ಅದೇ ರೀತಿಯಾಗಿ ಫಸಲು ಭೀಮಾ ಯೋಜನೆಯ ವಿಮೆವೂ ಕೂಡ ಆದಷ್ಟು ಬೇಗನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಜಿಲ್ಲಾ ಸಂಚಾಲಕ ರಾಜು ಚವ್ಹಾಣ, ಶೈಲಜಾ ಸ್ಟಾವರಮಠ ಮಾತನಾಡಿ, ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ. ಆದರೆ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಮತ್ತೊಮೆ ಸಮೀಕ್ಷೆ ಮಾಡಿ ಅವರೆಲ್ಲರಿಗೂ ಪರಿಹಾರ ನೀಡಬೇಕು. ಒಂದು ವೇಳೆ ಪರಿಹಾರ ನೀಡುವುದು ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಶೋಕ ಅಲ್ಲಾಪುರ, ಜಿಲ್ಲಾ ಕಾರ್ಯಧ್ಯಕ್ಷ ಪ್ರಕಾಶ ತೇಲಿ, ತಿಕೋಟಾ ತಾಲೂಕಾಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಪ್ರಕಾಶ ದಾಸರ, ರಿಯಾಜ್‌ಪಟೇಲ್ ಪಾಟೀಲ್, ಖಾದಿರಭಾಷಾ ವಾಲಿಕಾರ, ಸಂತೋಷ್ ಹೋನವಾಡ, ಬಸಪ್ಪ ನೆಸೂರ್, ಖಾದರಬಾಷಾ ಪೋಲಾಸಿ, ಲಾಲಮಹ್ಮದ ಪೋಲಾಸಿ, ಪ್ರಶಾಂತ ನಂದಿಕೋಲ ಸೇರಿದಂತೆ ಇತರರು ಇದ್ದರು.