ಉದಯರಶ್ಮಿ ದಿನಪತ್ರಿಕೆ
ಚಡಚಣ: “ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು” ಎಂಬ ಹಾಡಿನ ಮೂಲಕ ಚಿರಪರಿಚಿತರಾದ ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶು ಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದ ವಿಶಿಷ್ಟ ಸಾಹಿತಿ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ನ ಸದಸ್ಯ ರವೀಂದ್ರ ಕುಲಕರ್ಣಿ ಹೇಳಿದರು.
ಸ್ಥಳೀಯ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಗುರುವಾರ ಆಯೋಜಿಸಿದ ಡಾ. ಬೆಟಗೇರಿ ಕೃಷ್ಣಶರ್ಮ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ ಹಾಗೂ ಕಾವ್ಯ ಗಾಯನ ಕಾರ್ಯಕ್ರಮ ಆಶಯ ನುಡಿಗಳನ್ನಾಡಿದ ಅವರು ಭಾರತದ ಸ್ವಾತಂತ್ರ‍್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಬೆಟಗೇರಿ ಕೃಷ್ಣಶರ್ಮ ಕನ್ನಡ ನಾಡು ನುಡಿ ಕಂಡ ಒಬ್ಬ ಶ್ರೇಷ್ಠ ಕವಿ. ಬದುಕಿನುದ್ದಕ್ಕೂ ಸಂಘರ್ಷ, ಹೋರಾಟ, ಸಾವು ನೋವಿನ ಸರಮಾಲೆಯಲ್ಲಿ ರೋಗ ರುಜಿನ,ಆರ್ಥಿಕ ಸಂಕಷ್ಟದ ನಡುವೆಯೂ ಜಾನಪದ ಮಾರ್ಗದ ಜಟ್ಟಿ ಬೆಟಗೇರಿ ಕೃಷ್ಣ ಶರ್ಮ. ಅವರ ಹೆಸರಿನಲ್ಲಿ ಸರಕಾರ ಟ್ರಸ್ಟ್ ರಚಿಸಿರುವುದು,ಸಾಹಿತ್ಯದ ಅಧ್ಯಯನಕ್ಕಾಗಿ ಸರ್ಟಿಫಿಕೇಟ್ ಕೋರ್ಸ್ ಆರಂಬಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್. ಆರ್. ಅವಜಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಮಾತನಾಡಿ, ಬೆಟಗೇರಿ ಕೃಷ್ಣಶರ್ಮ ಒಬ್ಬ ಕನ್ನಡ ಕವಿ, ಲೇಖಕ, ಪತ್ರಿಕೋದ್ಯಮಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ ಅವರು ಕವನ, ಕಾದಂಬರಿ, ಕಥೆ, ವಿಮರ್ಶೆ, ಮತ್ತು ಜನಪದ ಸಾಹಿತ್ಯದಂತಹ ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಪ್ರೊ. ಮಹಾಂತೇಶ ಜನವಾಡ ಸ್ವಾಗತಿಸಿದರು, ಪ್ರೊ. ಎಸ್. ಎಫ್. ಬಿರಾದಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಡಾ. ಎಸ್. ಎಸ್. ಚೋರಗಿ, ವಿ. ಎಸ್. ಗಿಡವೀರ, ಸದಸ್ಯರಾದ ಬಾಬುಗೌಡ ಪಾಟೀಲ, ಡಾ. ಎಸ್. ಎಸ್. ದೇಸಾಯಿ, ಡಾ. ಆರ್.ಎಸ್. ಮಾವಿನಮರ, ಪ್ರೊ. ಬಸವರಾಜ ಯಳ್ಳೂರ, ಪ್ರೊ. ಮಯೂರ್ ಕುದುರಿ, ಪ್ರೊ. ಮುರುಗೇಶ್, ಸಂಜಯ ಅವಟಿ, ವಿನೋದ ಘೆವಂಡೆ, ರಾಮಣ್ಣ ನಡಗೇರಿ, ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.