ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು | ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಸಹ ಸಹಮತ ವ್ಯಕ್ತ | ಸಚಿವ ಶಿವಾನಂದ ಪಾಟೀಲ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಮೊನ್ನೆ ಕರೆದಿದ್ದ ಸಚಿವರ ಸಭೆಯಲ್ಲಿ ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದೇನೆ. ಸಿದ್ಧರಾಮಯ್ಯ ಅವರು ಈ ಹಿಂದೆ ಮುಖ್ಯಮತ್ರಿಗಳಾಗಿದ್ದಾಗ ನಾನೇ ಮೂರು ಬಾರಿ ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ ಎಂಬುದನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ್ದೇನೆ ಎಂದರು.
400 ಕೋಟಿ ರೂ. ಖರ್ಚಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದಾಗ ಬೇರೆಯವರು 500 ಕೋಟಿ ರೂ. ಖರ್ಚು ಮಾಡಿದರೂ, ನಮ್ಮ ಜಿಲ್ಲೆಯಲ್ಲಿ ಅದರ ಅರ್ಧಕ್ಕಿಂತ ಕಡಿಮೆ ಖರ್ಚಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗಲಿದೆ ಎಂದು ಮನವರಿಕೆ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರಿಗೂ ಹೇಳಿದ್ದು, ಅವರೂ ಒಪ್ಪಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಈ ವಿಷಯವನ್ನು ಚರ್ಚೆ ಮಾಡಿದಾಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದಾರೆ ಎಂದರು.
ವಿಜಯಪುರ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಸ್ವಯಂ ಪ್ರೇರಿತ ಹೋರಾಟ ನಡೆಯುತ್ತಿದೆ. ಯಾವುದೇ ಪ್ರತಿಭಟನೆ ಒಂದು ಬೇಡಿಕೆ ಇಟ್ಟುಕೊಂಡು ನಡೆಯುತ್ತದೆ. ಧರಣಿ ಕುಳಿತವರು ಅಪರಾಧಿ-ನಿರಪರಾಧಿ ಎಂದು ಸಂಬೋಧಿಸುವುದು ಸರಿಯಲ್ಲ. ಯಾರದೋ ಕುಮ್ಮಕ್ಕಿನಿಂದ ಹೋರಾಟ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹೇಳಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಸಚಿವರು ಪ್ರತಿಕ್ರಿಯಿಸಿದರು.
ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ನಿರ್ಧರಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ನಮ್ಮ ಸರ್ಕಾರದ ಅವಧಿಯಲ್ಲಾಗಿಲ್ಲ, ಈ ಕುರಿತು ಮರು ಪರಿಶೀಲನೆ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಕಾನೂನು ಪ್ರಕ್ರಿಯೆ ಮುಗಿದ ಮೇಲೆ ಸರಳವಾಗಿ ಕಾಲೇಜು ಸ್ಥಾಪನೆಗೆ ಅವಕಾಶ ಸಿಗಲಿದೆ ಎಂದರು.

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಗೆ ಪ್ರಯತ್ನ
ವಿಜಯಪುರ: ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಕಟ್ಟಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು, ಈ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಆಗಿ ಉನ್ನತ ಸಾಧನೆ ಮಾಡಲಿ ಎಂಬ ಆಶಯ ಹೊಂದಿದ್ದೇನೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ಹೇರಿ ಶ್ರೀಗಳ ಕುರಿತು ಆಕ್ರೋಶ ಬೇಡ
ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಗೆ ಹೋಗಿ ಕನ್ಹೇರಿ ಶ್ರೀಗಳು ರೈತರ ಪರವಾಗಿ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಬಸವಣ್ಣನವರ ವಿಷಯ, ಆಶಯಗಳನ್ನೇ ಇರಿಸಿಕೊಂಡು ಬಸವನಬಾಗೇವಾಡಿಯಲ್ಲೂ ಮಠ ಕಟ್ಟುತ್ತಿದ್ದಾರೆ. ಇದನ್ನು ಗಮನಿಸಿ, ಬಸನಬಾಗೇವಾಡಿ ಜನರು ಆಕ್ರೋಶ ಕೈ ಬಿಟ್ಟು ಸಾಮರಸ್ಯದಿಂದ ಸಾಗಬೇಕು ಎಂದು ಸಚಿವರು ಮನವಿ ಮಾಡಿದರು.

ಅಶ್ಲೀಲ ಪದ ಯಾರಿಂದಲೂ ಸಲ್ಲದು
ರಾಜಕಾರಣಿಗಳಿರಲಿ, ಸ್ವಾಮಿಗಳಿರಲಿ, ಸಾರ್ವಜನಿಕರಿರಲಿ ಯಾರೂ ವ್ಯಕ್ತಿಗತ ಅಶ್ಲೀಲ ಪದ ಬಳಕೆ, ನಿಂದನೆ ಮಾಡಬಾರದು ಎಂದು ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿದರು.
ಬಸವನಬಾಗೇವಾಡಿ ನನ್ನ ಕ್ಷೇತ್ರದಿಂದಲೇ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬಸವಣ್ಣವರ ವೈಚಾರಿಕ ಪ್ರಜ್ಞೆಯಿಂದ ಲಿಂಗಾಯತ ಸಮಾಜವನ್ನು ನಂಬಿ ಬೇರೆ ಸಮಾಜದವರು ಪರಿವರ್ತನೆಗೊಂಡು ಬಂದಿದ್ದಾರೆ. ಅವರಿಗೂ ನ್ಯಾಯ ಕೊಡಬೇಕಿರುವುದು ಧರ್ಮದ ಕರ್ತವ್ಯ ಎಂದರು.
ಬಾಕ್ಸ್ ೨