ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಆಂತರಿಕ ರಸ್ತೆಗಳನ್ನು ಸಿ.ಸಿ. ರಸ್ತೆಯಾಗಿ ಅಭಿವೃದ್ಧಿಪಡಿಸಲು ಹಾಗೂ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ರೂ. 1.25 ಕೋಟಿ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಇಂಗಳೇಶ್ವರ ಗ್ರಾಮಸ್ಥರು ಸಚಿವ ಶಿವಾನಂದ ಪಾಟೀಲ ಅವರನ್ನು ಗುರುವಾರ ವಿಜಯಪುರದ ನಿವಾಸದಲ್ಲಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು.
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಅಭಿವೃದ್ಧಿಪರ ಕಾಳಜಿಯ ಕಾರಣದಿಂದ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇಂಗಳೇಶ್ವರ ಆಂತರಿಕ ರಸ್ತೆಗಳ ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶಾಲೆಗಳ ಕೊಠಡಿಗಳ ನಿರ್ಮಾಣ ಕಾಮಗಾರಿಗಾಗಿ ರೂ.1.25ಕೋಟಿ ತಾಂತ್ರಿಕ ಮಂಜೂರಾತಿ ಸಿಕ್ಕಿದೆ. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅನುದಾನದಲ್ಲಿ ಸದರಿ ಕಾಮಗಾರಿಗಳನ್ನು ಕೈಗೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಗಲಕೋಟೆಯ ಪುನರ್ವಸತಿ-ಪುನರ್ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರು ತಾಂತ್ರಿಕ ಮಂಜೂರಾತಿ ನೀಡಿ ಆದೇಶಿಸಿದ್ದಾರೆ.
ತಮ್ಮೂರಿನ ರಸ್ತೆಗಳು ಸಿ.ಸಿ. ರಸ್ತೆಗಳಾಗಿ ಉನ್ನತೀಕರಣಗೊಳ್ಳಲು ಹಾಗೂ ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಸಚಿವರು ವಿಶೇಷ ಕಾಳಜಿ ತೋರಿದ್ದರಿಂದ ಇಂಗಳೇಶ್ವರ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಇದಕ್ಕಾಗಿ ಗ್ರಾ.ಪಂ ಅಧ್ಯಕ್ಷ-ಎಸ್.ಡಿ.ಎಂ.ಸಿ. ಅಧ್ಯಕ್ಷರ ನೇತೃತ್ವದಲ್ಲಿ ವಿಜಯಪುರ ನಗರದ ಗೃಹ ಕಛೇರಿಗೆ ಆಗಮಿಸಿ ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬನ್ನೆಪ್ಪ ವಿಠ್ಠಪ್ಪ ಡೋಣೂರು, ಎಸ್.ಡಿ.ಎಂ.ಸಿ. ಅಧ್ಯಕ್ಷ ರೇವಣಸಿದ್ಧಪ್ಪ ಅವಟಿ, ಶ್ರೀಶೈಲ ಚಾಂದಕವಠೆ, ಮುತ್ತಪ್ಪ ಮಾದರ, ಸಹ ಶಿಕ್ಷಕ ಬಿ.ಎಸ್.ಸಂಕಗೊಂಡ, ಎ.ಎಲ್.ಗಂಗೂರ ಸೇರಿದಂತೆ ಇತರರು ಇದ್ದರು.

