ಶಾಸಕ ಅಶೋಕ ಮನಗೂಳಿ ಗೆ ಮಾಜಿ ಶಾಸಕ ರಮೇಶ ಭೂಸನೂರ ಸವಾಲು
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮ ಮಾತುಗಳಿಗೆ ತಿರುಚಿ ಮಾತನಾಡುವುದನ್ನು ಬಿಟ್ಟು ವಾಸ್ತವಿಕ ವರದಿಯನ್ನು ಜನರಿಗೆ ತಿಳಿಸಬೇಕು. ನಿಮಗೆ ತಾಕತ್ತು ದಮ್ಮು ಇದ್ದರೆ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ದೀಪಾವಳಿ ಬಳಿಕ ಕಬ್ಬು ನುರಿಸುವ ಕಾರ್ಯವನ್ನು ರೈತರು ಪ್ರಾರಂಭ ಮಾಡುತ್ತಾರೆ. ಅದಕ್ಕಾಗಿ ತಾಲೂಕಿನಾದ್ಯಂತ ಬಿದ್ದಿರುವ ರಸ್ತೆ-ಗುಂಡಿಗಳನ್ನು ಮುಚ್ಚಿಸುವಂತ ಕಾರ್ಯ ನಿಮ್ಮಿಂದಾಗಲಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಕಿಡಿಕಾರಿದರು.
ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ೩ನೆಯ ದಿನದ ಧರಣಿ ಸತ್ಯಾಗ್ರಹದ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ಬಿಪಿಎಲ್ ರೇಷನ್ ಕಾರ್ಡ್ನ್ನು ರದ್ದು ಮಾಡುವ ಕಾರ್ಯಕ್ಕೆ ಸರಕಾರ ಕೈಹಾಕಿದ್ದು ಖಂಡನೀಯ. ೨೦೦೯ ಮತ್ತು ೨೦೧೯ರಲ್ಲೂ ಬಂದಿತ್ತು. ಅಂದಿನ ಬಿಜೆಪಿ ಸರಕಾರ ೧ಲಕ್ಷ ಕೋಟಿ ಬಜೆಟ್‌ನಲ್ಲಿ ಸಿಂದಗಿ ತಾಲೂಕಿನ ೮ ಹಳ್ಳಿಗಳನ್ನು ನನ್ನ ಅವಧಿಯಲ್ಲಿ ಸ್ಥಳಾಂತರವನ್ನು ಮಾಡಿದ್ದೇನೆ. ಪ್ರಸ್ತುತ ೩ಲಕ್ಷ ಕೋಟಿಗೂ ಅಧಿಕ ಬಜೆಟ್‌ಯಿದ್ದರೂ ಶಾಸಕರೇ ನಿಮ್ಮಿಂದ ಒಂದು ಕುಮಸಗಿ ಗ್ರಾಮ ಸ್ಥಳಾಂತರ ಮಾಡುವುದು ಆಗುತ್ತಿಲ್ಲ. ರಾಜ್ಯ ಸರಕಾರದ ಬೊಕ್ಕಸ ಖಾಲಿಯಾಗಿ ಹಣವಿಲ್ಲ, ಸಮೀಕ್ಷೆಗೆ ಕೇಂದ್ರ ನಿಯೋಗ ಕಳಿಸಿ ಕೇಂದ್ರ ಸರಕಾರ ಸಹಾಯ ಮಾಡಬೇಕೆಂದು ಪತ್ರ ಬರೆಯಿರಿ. ಏಕೆಂದರೆ ರಾಜ್ಯ ಸರಕಾರದಿಂದ ವಾಸ್ತವ ಸಮೀಕ್ಷೆ ಮಾಡಲು ಸಾಧ್ಯವಾಗದೆ ಇರುವುದರಿಂದ ಸುಖಾ ಸುಮ್ಮನೆ ಬಿಜೆಪಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತರಿದ್ದಾರೆ ಎಂಬುದನ್ನು ಮಾತನಾಡುವುದು ಬೀಡಬೇಕು ಎಂದು ಕುಟುಕಿದರು.
ಸಿಂದಗಿ ತಾಲೂಕಿನಲ್ಲಿ ತೊಗರಿ ೧೬೩೦೦ ಹೆಕ್ಟರ್, ಹತ್ತಿ ೩೦೫೦೦ ಹೆಕ್ಟರ್, ಮೆಕ್ಕೆಜೋಳ ೧೩೦೦ಹೆಕ್ಟರ್, ಆಲಮೇಲದಲ್ಲಿ ತೊಗರಿ ೬೦೬೫ ಹೆಕ್ಟರ್, ಹತ್ತಿ ೨೫ಸಾವಿರ ಹೆಕ್ಟರ್, ಮೆಕ್ಕೆಜೋಳ ೨೮೦ ಹೆಕ್ಟರ್ ಬಿತ್ತನೆಯಾಗಿದೆ. ಒಟ್ಟಾರೆಯಾಗಿ ಆಲಮೇಲ ಮತ್ತು ಸಿಂದಗಿ ಸೇರಿ ೭೯೫೦೦ ಹೆಕ್ಟರ್ ಆಗಿದೆ. ೨೨,೫೦೦ ಹೆಕ್ಟರ್‌ನಲ್ಲಿ ಕಬ್ಬು ಮತ್ತು ಉಳಿದ ಬೆಳೆಗಳೆಲ್ಲಾ ಸೇರಿ ೧ಲಕ್ಷಕ್ಕೂ ಅಧಿಕ ಮುಂಗಾರಿನ ಬಿತ್ತನೆ ಹಾಳಾಗಿದೆ. ಕೇವಲ ಶೇ.೪೦-೫೦ರಷ್ಟು ಮಾತ್ರ ನಷ್ಟ ತೊರಿಸುತ್ತೀರಿ. ಆದರೆ ಇದರಿಂದ ರೈತರಿಗೆ ವಿಮೆ ಮತ್ತು ಕೇಂದ್ರ ಸರಕಾರದಿಂದ ಬರುವ ಎನ್‌ಡಿಆರ್‌ಎಫ್ ಪರಿಹಾರ ಬರದೇ ಎರಡು ರೀತಿಯ ಪೆಟ್ಟು ಬೀಳುತ್ತದೆ ಎಂದು ಹಾಲಿ ಶಾಸಕರ ವಿರುದ್ಧ ಗುಡುಗಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಕಳೆದ ಎರಡು ತಿಂಗಳಿಂದ ಪಿಪಿ ಮೆಡಿಕಲ್ ಕಾಲೇಜು ಬೇಡವೆಂದು ರೈತ ಸಂಘ ಪ್ರತಿಭಟನೆ ಮಾಡುತ್ತಿದ್ದೆ. ದುರ್ದೈವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕರುಣೆಯಿಲ್ಲ. ಕಾಂಗ್ರೆಸ್ ಸರಕಾರದ ಪರಿಸ್ಥಿತಿ ಹದಗೆಟ್ಟಿದೆ. ಮುಂಬರುವ ದಿನಮಾನಗಳಲ್ಲಿ ಜಿಲ್ಲೆಯಾದ್ಯಂತ ರೈತರ ಪರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸುರೇಶ ಬಿರಾದಾರ, ಎಸ್.ಎ.ಪಾಟೀಲ, ಮಲ್ಲಿಕಾರ್ಜುನ ಜೋಗುರ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲಿಕಾರ್ಜುನ ಸಾವಳಸಂಗ, ಪ್ರಶಾಂತ ಕದ್ದರಕಿ, ಬಸವರಾಜ ಐರೋಡಗಿ, ಸಿದ್ರಾಮ ಆನಗೊಂಡ, ಶ್ರೀಕಾಂತ ಬಿಜಾಪೂರ, ಶಿಲ್ಪಾ ಕುದರಗೊಂಡ ಸೇರಿದಂತೆ ಜಿಲ್ಲಾ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ತಾಲೂಕಿನ ರೈತರು ಭಾಗವಹಿಸಿದರು.