ಮುದ್ದೇಬಿಹಾಳ: ಜೈನ ಎನ್ನುವುದು ಒಂದು ಜಾತಿಯಲ್ಲ ಅದೊಂದು ನಿಜವಾದ ಸಂಸ್ಕಾರವಂತ ಮನುಷ್ಯ ಧರ್ಮ. ಪರೋಪಕಾರ, ದಾನ- ಧರ್ಮ ಮಾಡುವುದರಲ್ಲಿ ಜೈನ ಸಮಾಜವು ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರೂ ಪರರಿಗೆ ಸಹಾಯ, ನೆರವು ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಜೈನ ಮಠ ಹೊಂಬುಜದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪಾರ್ಶ್ವನಾಥ ಭಗವಾನರ ಹಾಗೂ ಮಹಾಮಾತೆ ಪದ್ಮಾವತಿ ದೇವಸ್ಥಾನದ ನೂತನ ಯಾತ್ರಿ ನಿವಾಸ ಹೊಸ ಕಟ್ಟಡದ ಕಾರ್ಯಾಲಯ ಸಭಾಮಂಟಪದ ಉದ್ಘಾಟನೆ ಹಾಗೂ ದಾನಿಗಳಿಗೆ ಗೌರವ ಸನ್ಮಾನ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಹಿಂಸಾ ತತ್ವವನ್ನು ಬೋಧನೆ ಮಾಡಿ ಅಹಿಂಸಾ ತತ್ವದಲ್ಲೇ ಧರ್ಮವನ್ನು ಕಟ್ಟಿ ಇಡೀ ಪ್ರಪಂಚಕ್ಕೆ ಸಾತ್ವಿಕ ತತ್ವ ಉಪದೇಶಗಳನ್ನು ನೀಡಿದ ಕೀರ್ತಿ ಜೈನ ಧರ್ಮಕ್ಕಿದೆ. ಜೈನ ಧರ್ಮದವರು ಬೌದ್ಧಿಕವಾಗಿ ಬಲಶಾಲಿಗಳಾಗಿದ್ದು, ಸಂಸ್ಕಾರ ಹಾಗೂ ಧಾರ್ಮಿಕ ವಿದ್ಯೆಯ ಮೂಲಕ ಸಂಪೂರ್ಣ ಸಾಕ್ಷರತೆ ಹೊಂದಿದ ಹೆಗ್ಗಳಿಕೆ ಹೊಂದಿದೆ. ಜೈನ ವಿದ್ಯಾಲಯ ಹಾಗೂ ಜೈನ ಮಂದಿರಗಳ ಜೀರ್ಣೋದ್ದಾರ ಇಂದಿನ ಅಗತ್ಯ ಕರ್ತವ್ಯಗಳ್ಲೊಂದಾಗಿದೆ. ಜೈನರು ಎಲ್ಲ ಧರ್ಮದವರೊಂದಿಗೆ ಅನ್ಯೂನ್ಯ ಸಹೋದರತೆ ಬಾಂದವ್ಯದಿಂದ ಮುನ್ನಡೆದು ಬಂದವರು. ರಾಜಕೀಯವಾಗಿ ಮುಂದೆ ಇಲ್ಲದಿದ್ದರೂ ಕಿಂಗಾಗುವ ಬದಲು ಕಿಂಗ್ ಮೇಕರಾಗಿ ಬೆಳೆದದ್ದನ್ನು ಕಳೆದ ನಾಲ್ಕು ವರ್ಷಗಳ ರಾಜಕೀಯದಲ್ಲಿ ನೋಡಿದ್ದೇವೆ ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರು ಮಾತನಾಡಿ, ಇಂದಿನ ವೈಜ್ಞಾನಿಕ ಕಾಲದಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಸಂಸ್ಕಾರದ ಹಾಗೂ ದಾನಧರ್ಮ ಮಾಡುವ ಸಂಸ್ಕಾರದ ಅಗತ್ಯವಿದೆ. ಹಿರಿಯರು ತಾವು ಹೋಗುವ ದೇವಸ್ಥಾಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ದೇಣಿಗೆ ಹುಂಡಿಯಲ್ಲಿ ತಮ್ಮ ಮಕ್ಕಳ ಕೈಯಿಂದ ದಾನದ ರೂಪದಲ್ಲಿ ಕಾಣಿಕೆ ಹಾಕಿಸಬೇಕು. ಆಗ ಮಕ್ಕಳಲ್ಲಿ ದಾನ ಧರ್ಮದ ಮತ್ತು ಮಾನವಿಯ ಮೌಲ್ಯಗಳ ಅರಿವಾಗುತ್ತದೆ ಎಂದರು.
ಈ ವೇಳೆ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಅಶೋಕ ಮಣಿಯವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಮೀಟಿಯ ಅಧ್ಯಕ್ಷ ಅಭಿನಂದನ ಗೋಗಿ, ರಬಕವಿ ಹಜಾರೆ ಟೇಕ್ಸ್ ಟೈಲ್ಸ್ನ ಗಣಪತರಾವ ಹಜಾರೆ, ಚಡಚಣದ ಗಣ್ಯ ಉದ್ಯಮಿ ಬಾಹುಬಲಿ ಮುತ್ತಿನ, ವಿಜಯಪುರ ಉದ್ಯಮಿ ಅಪ್ಪಾಸಾಹೇಬ ಮುತ್ತಿನ, ಗಜೇಂದ್ರಗಡದ ಉದ್ಯಮಿ ಬಾಹುಬಲಿ ಹೂಲಿ, ಜೈನ ಶ್ವೇತಾಂಬರ ಸಮಾಜದ ಮುಖಂಡ ಬಾಬುಲಾಲ ಓಸ್ವಾಲ್, ಮಾಣಿಕ ದಂಡಾವತಿ, ಗೊಮ್ಮಟೇಶ ಸಗರಿ, ಮಹಾವೀರ ಸಗರಿ, ಭರತೇಶ ಮಂಕಣಿ, ಸೇರಿದಂತೆ ಹಲವರು ಇದ್ದರು.
“ಪಟ್ಟಣದ ಪದ್ಮಾವತಿ ದೇವಸ್ಥಾನ ಗುಡ್ಡದಲ್ಲಿರೂ ಕೂಡ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ ಧಾರ್ಮಿಕ ಸ್ಥಳವಾಗಿದೆ. ಈ ಮೊದಲು ಕೇವಲ ಒಂದೇ ಒಂದು ದೇವಸ್ಥಾನ ಮಾತ್ರ ನಿರ್ಮಿಸಲಾಗಿತು ಸಧ್ಯ ಇಲ್ಲಿನ ಜೈನ ಸಮಾಜ ಬಾಂಧವರು ಎಲ್ಲರೂ ಒಂದಾಗಿ ಸಾಕಷ್ಟು ಹಣವನ್ನು ದೇಣಿಗೆದಾರರಿಂದ ಸಂಗ್ರಹಿಸಿ ಶುಭ ಸಮಾರಂಭಗಳು ನಡೆಯವಂತಹ ಸುಸಜ್ಜಿತ ಮಂಗಲ ಕಾರ್ಯಾಲಯ ಹಾಗೂ ವಸತಿ ಉಳಿದುಕೊಳ್ಳಲು ಕೋಠಡಿಗಳನ್ನು ನಿರ್ಮಿಸಿ ಇದೊಂದು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡಿದ್ದು ನಿಜಕ್ಕೂ ಶ್ಲಾಘನಿಯ.”
ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು. ಶಿವಮೊಗ್ಗ