ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ರಾಜ್ಯ ಸರ್ಕಾರಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಅತಿವೃಷ್ಟಿಯಿಂದ ಹಾಳಾದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಕೂಡಲೇ ಹೆಕ್ಟೆರ್‌ಗೆ ೨೫ ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲ್ಲೂಕು ಸೇರಿದಂತೆ ತಾಳಿಕೋಟೆ ತಾಲ್ಲೂಕಿನ ಕಲಕೇರಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೫೦ ಸಾವಿರ ಹೆಕ್ಟೆರ್‌ದಲ್ಲಿ ಬಿತ್ತನೆಯಾದ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ಜಿಲ್ಲಾಡಳಿತ ಈ ಪ್ರದೇಶದಲ್ಲಿ ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆ ಹಾಗೂ ವರದಿಯನ್ನು ಸರ್ಕಾರಕ್ಕೆ ನೀಡಿ ರೈತರಿಗೆ ನೆರವಿಗೆ ನಿಲ್ಲಬೇಕು
ತಾಲ್ಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಪ್ರತಿಶತ ೬೦ ಕ್ಕಿಂತ ಹೆಚ್ಚಿನ ಮಳೆಯಾದ ಪರಿಣಾಮ ನೀರಾವರಿಯಿಂದ ವಂಚಿತವಾದ ಒಣಖುಷ್ಕಿ ಭೂಮಿ ಎಂದು ಕರೆಯಲ್ಪಡುವ ಜಮೀನುಗಳು ಸಂಪೂರ್ಣ ಹಾಳಾಗಿವೆ.ಈಗ ಇಂಥ ಪ್ರದೇಶದ ಬೆಳೆಗಳ ಸಮೀಕ್ಷೆಗಾಗಿ ಕೇವಲ ಗ್ರಾಮಾಡಳಿತಾಧಿಕಾರಿ, ಪಿಡಿಓ ಸಹಿತ ಮೂವರನ್ನು ನೇಮಕ ಮಾಡಲಾಗಿದೆ. ಇದರಿಂದ ಬೆಳೆಯ ಹಾನಿಯ ಕುರಿತು ಸ್ಪಷ್ಟ ವರದಿ ಸಾಧ್ಯವಿಲ್ಲ. ಆದ್ದರಿಂದ ರೈತರೇ ಮುಂದಿನ ಬೆಳೆ ಬೆಳೆಯಲು ಹರಗುವ ಮುಂಚೆ ಸ್ವತಃ ತಮ್ಮ ಮೋಬೈಲ್‌ಗಳ ಮೂಲಕ ತಮ್ಮ ಜಮೀನುಗಳಲ್ಲಿ ಹಾನಿಯಾದ ಬಗ್ಗೆ ಚಿತ್ರಿಕರಿಸಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರಗಳಿಗೆ ಮಾಹಿತಿ ನೀಡಬೇಕು ಎಂದರು.
೨೦೦೯ ಹಾಗೂ ೨೦೧೯ರಲ್ಲಿ ಅತೀವೃಷ್ಟಿ ಆದಾಗ ಯಡಿಯೂರಪ್ಪ ನೇತೃತ್ವದ ಸರ್ಕಾರ ೬೮ ಹಳ್ಳಿಗಳನ್ನು ಸ್ಥಳಾಂತರಿಸಿ, ಮನೆ ಕಳೆದುಕೊಂಡವರಿಗೆ ೫ ಲಕ್ಷ.ರೂಗಳು, ಮನೆಯಲ್ಲಿ ನೀರು ಹೊಕ್ಕ ಕುಟುಂಬಕ್ಕೆ ೧೦ ಸಾವಿರ. ರೂಗಳು ಹಾಗೂ ಜಮೀನುಗಳಿಗೆ ೧೦ ಸಾವಿರದ ಮೇಲೆ ಪರಿಹಾರ ನೀಡಿತ್ತು. ಈಗ ಮಹಾರಾಷ್ಟç ರಾಜ್ಯದ ಬಿಜೆಪಿ ಸರ್ಕಾರ ಭೀಮಾ ನದಿಯಿಂದ ಹಾನಿಗೊಳಗಾದ ರೈತರಿಗೆ ಎಕರೆಗೆ ೩೭ ಸಾವಿರ ಬೆಳೆ ಪರಿಹಾರ ಹಾಗೂ ಸಂಪೂರ್ಣ ಜಮೀನು ಹಾಳಾದ ರೈತರಿಗೆ ೩ ಲಕ್ಷ ರೂ.ಪರಿಹಾರ ನೀಡಲು ಮುಂದಾಗಿದೆ. ಆದರೆ ಸಿದ್ಧರಾಮಯ್ಯ ಸರ್ಕಾರ ಇದಾವದನ್ನು ಪರಿಗಣಿಸದೇ ಕೇವಲ ೨ ಸಾವಿರ ಕೋಟಿ ಪರಿಹಾರ ಘೋಷಿಸಿ ರೈತರ ಕುರಿತು ಸಂಪೂರ್ಣ ನಿರ್ಲಕ್ಷö್ಯ ತಾಳಿದೆ. ಕೂಡಲೇ ಸರ್ಕಾರ ಇಡಿ ಪ್ರದೇಶ ಬೆಳೆಯಿಂದ ಹಾನಿಗೊಳಗಾಗಿದೆ ಎಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದರು.
ಈ ಸಂದರ್ಭದಲ್ಲಿ ಮದನಸ್ವಾಮಿ ಹಿರೇಮಠ, ಅಶೋಕ ರಾಠೋಡ, ಗಿರೀಶಗೌಡ ಪಾಟೀಲ, ನಿಖಿಲ ಮಲಗಲದಿನ್ನಿ ಇದ್ದರು.