ಪಂದ್ಯಾವಳಿಯ ಲಾಂಛನ ಮತ್ತು ಟ್ರೋಪಿ ಬಿಡುಗಡೆಗೊಳಿಸಿ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ಸಿಂದಗಿ ಪಟ್ಟಣದಲ್ಲಿ ಜರುಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಪಂದ್ಯಾವಳಿ ಯಶಸ್ವಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿಯ ಲಾಂಛನ ಮತ್ತು ಟ್ರೋಪಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೂ ತಾಲೂಕಾಡಳಿತದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಇಂದಿನ ಪಾಲಕರು ಕೇವಲ ಶಿಕ್ಷಣದ ಬಗ್ಗೆ ಮಾತ್ರ ಒಲವನ್ನು ತೋರಿಸುತ್ತಿದ್ದಾರೆ. ಅದರ ಜೊತೆಗೆ ಕ್ರೀಡೆ ಬಗ್ಗೆನೂ ಮಕ್ಕಳಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸಬೇಕಾಗಿದೆ. ದೈಹಿಕ ಮಾನಸಿಕ ಮತ್ತು ಬೌದ್ಧಿಕ ಪ್ರಕ್ರಿಯೆಗಳು ಕ್ರೀಡೆಗಳಿಂದ ಉತ್ತಮಗೊಳ್ಳುತ್ತವೆ. ಕ್ರೀಡಾ ಶಿಕ್ಷಣ ಇಂದಿನ ಯುವ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿದೆ ಹೆಚ್ಚು ಹೆಚ್ಚು ಕ್ರೀಡೆಗಳನ್ನು ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳಬೇಕಾಗಿದೆ ಆ ದಿಸಿಯಲ್ಲಿ ದೈಹಿಕ ಶಿಕ್ಷಕರು ಹೆಚ್ಚು ಕಾರ್ಯನಿರ್ವಹಿಸಬೇಕು ಎಂದರು.
ಅ.೨೩,೨೪,೨೫ರಂದು ನಡೆಯಲಿರುವ ಈ ಪಂದ್ಯಾವಳಿಗೆ ಸಚಿವರುಗಳು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಆಗಮಿಸಲಿದ್ದಾರೆ. ವಿವಿಧ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ತಮಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೊಳ್ಳಲಿದೆ ಎಂದರು.
ಈ ವೇಳೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ, ವಿಜಯಪುರ ಪದವಿಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ, ಕ್ರೀಡಾಕೂಟದ ಯಶಸ್ವಿಗೆ ಅನೇಕ ವಿಭಾಗಗಳನ್ನು ಮಾಡಲಾಗಿದೆ. ಆ ಎಲ್ಲಾ ವಿಭಾಗಗಳಿಗೆ ಮುಖ್ಯಸ್ಥರನ್ನು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ. ತಮಗೆ ನೀಡಿದ ಕಾರ್ಯವನ್ನು ತಾವು ನಿರ್ವಹಿಸಲೇಬೇಕು ಯಾವುದೇ ಕಾರಣ ಹೇಳಿ ತಪ್ಪಿಸುವಂತಿಲ್ಲ. ವಿಜಯಪುರದ ಇಲಾಖೆ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿ ಬಂದಿರುವುದರಿಂದ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಸೂಕ್ಷ್ಮತನದಿಂದ ಕಾರ್ಯವನ್ನ ನಿರ್ವಹಿಸಬೇಕು ೩ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು ೯೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಪಟುಗಳಾಗಿ ಭಾಗವಹಿಸುತ್ತಾರೆ. ಹಾಗೆಯೇ ನುರಿತ ತರಬೇತಿದಾರರು ಆಗಮಿಸಲಿದ್ದಾರೆ. ಅವರ ವಸತಿಗೆ ಈಗಾಗಲೇ ಸಿಂದಗಿ ಪಟ್ಟಣದ ವಿವಿಧ ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳನ್ನು ನೇಮಕ ಮಾಡಲಾಗಿದೆ. ಉಪನ್ಯಾಸಕರು ಆಸಕ್ತಿಯಿಂದ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ದೈಹಿಕ ಶಿಕ್ಷಣ ಉಪನ್ಯಾಸಕ ಶಾಂತೇಶ ದುರ್ಗಿ ಮಾತನಾಡಿದರು.
ವೇದಿಕೆಯ ಮೇಲೆ ಕೆ. ಎಚ್. ಸೋಮಾಪೂರ, ಎಮ್. ಡಿ. ಹೆಬ್ಬಿ, ಕೆ. ಎ. ಉಪ್ಪಾರ, ಕೆ. ಜಿ. ಲಮಾಣಿ, ಎಲ್. ಆಯ್. ಹುಣಸಿಕಟ್ಟಿ, ಜೆ. ಸಿ. ಪಾಟೀಲ, ವಿ. ಡಿ. ಪಾಟೀಲ, ಬಿ. ಎಮ್. ಸಿಂಗನಳ್ಳಿ, ಬಿ. ಡಿ. ದೊ ಟಿಹಾಳ, ಸುನೀಲ ಜಾದವ, ಸತೀಶ ಬಸರಕೋಡ ಸೇರಿದಂತೆ ಇತರರು ಇದ್ದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರು ಭಾಗವಹಿಸಿದ್ದರು.