ಬಿಜೆಪಿ ಮಂಡಲ ಮತ್ತು ರೈತ ಮೋರ್ಚಾ ವತಿಯಿಂದ ಅಹೋರಾತ್ರಿ ಧರಣಿ | ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಗಳೆಲ್ಲ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರ ಬಗ್ಗೆ ಯೋಚನೆ ಮಾಡದೆ ಅಧಿಕಾರಕ್ಕಾಗಿ ಸಭೆ ಮಾಡುತ್ತಿರುವ ಸರಕಾರವನ್ನು ನನ್ನ ನಿರಂತರ ೪೫ ವರ್ಷಗಳ ರಾಜಕಾರಣದಲ್ಲಿ ಇಂತಹ ಹೊಲಸು ಸರಕಾರವನ್ನು ನಾನು ಎಂದು ನೋಡಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಏನಾದರೂ ಮಾಡಿಕೊಂಡ ಹಾಳು ಬಾವಿಗೆ ಬಿಳಿ, ರೈತರ ಕಣ್ಣಿರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ನೀವು ಕುರ್ಚಿಗಾಗಿ ಬಡೆದಾಡುತ್ತಿರುವುದು ಸರಿಯಲ್ಲ. ರೈತರು ಬೆಳೆದ ಬೆಳೆಯಲ್ಲ ಹಾಳಾಗಿ ಹೋಗಿದೆ. ಸರಕಾರದ ಬೆಳೆಹಾನಿ ಸಮೀಕ್ಷೆಯ ವರದಿ ತಪ್ಪಾಗಿದ್ದು, ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು. ರೈತರಿಗೆ ಪರಿಹಾರ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸರಕಾರ ಜಾತಿ ಜಾತಿಗಳ ಮಧ್ಯದಲ್ಲಿ ಜಗಳ ಹಚ್ಚುವ ಜಾತಿಗಣತಿಯನ್ನು ಕೈಬಿಟ್ಟು, ಬೆಳೆ ಹಾನಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇಡೀ ರಾಜ್ಯದ ಬೊಕ್ಕಸ ಬರಿದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ರಾಜ್ಯ ಸರಕಾರ ದಿವಾಳಿಯತ್ತ ಸಾಗುತ್ತಿದೆ. ೬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರದ ನೀತಿಯನ್ನು ಖಂಡಿಸಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬೆಳೆಹಾನಿಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಮ್ಮ ರೈತರಿಗೆ ದೊರೆಯಬೇಕಾದ ಬೆಳೆಹಾನಿ ಪರಿಹಾರ ದೊರೆಯುತ್ತಿಲ್ಲ. ನೆರೆಯ ಮಹಾರಾಷ್ಟç ಸರ್ಕಾರ ೩೧ಸಾವಿರ ಕೋಟಿ ಬೆಳೆಹಾನಿ ಪರಿಹಾರ ಘೋಷಣೆ ಮಾಡಿದೆ. ಆದರೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಘೋಷಣೆ ಮಾಡಿದ್ದು ಮಾತ್ರ ಕೇವಲ ೨ಸಾವಿರ ಕೋಟಿ ಪರಿಹಾರ ಮಾತ್ರ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಮಲ್ಲನಗೌಡ ಪಾಟೀಲ, ಈರಣ್ಣ ರಾವೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಎಂ.ಎಸ್.ಮಠ, ಮಲ್ಲಿಕಾರ್ಜುನ ಸಾವಳಸಂಗ, ಪ್ರಶಾಂತ ಕದ್ದರಕಿ, ಗುರು ತಳವಾರ, ಎಸ್.ಎನ್.ಹಿರೇಮಠ, ಬಸವರಾಜ ಐರೋಡಗಿ, ಕಲ್ಯಾಣಿ ಬಿರಾದಾರ, ಸಿದ್ರಾಮ ಆನಗೊಂಡ, ಶಿಲ್ಪಾ ಕುದರಗೊಂಡ, ರಾಜಶೇಖರ ಪೂಜಾರಿ, ಅಶೋಕ ನಾರಾಯಣಪೂರ, ಬಂಗಾರೆಪ್ಪ ಬಿರಾದಾರ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು, ವಿವಿಧ ತಾಲೂಕಿನ ರೈತರು ಭಾಗವಹಿಸಿದ್ದರು.