ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪುರಸಭೆಗೆ ಶಾಶ್ವತ ಆದಾಯವನ್ನು ತರುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಹೆಸರಿನಲ್ಲಿರುವ ಜಾಗೆಯನ್ನು ಪುರಸಭೆಯ ಹೆಸರಿನಲ್ಲಿ ಹಸ್ತಾಂತರ ಮಾಡಿ ೧.೧೪ ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ಮೇಘಾ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಹಳೆ ತಹಶೀಲ್ದಾರ್ ಆವರಣದಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಮೇಗಾ ಮಾರುಕಟ್ಟೆ ನಿರ್ಮಿಸುವ ಮೊದಲನೆಯ ಹಂತದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರದಲ್ಲಿ ಮೇಘಾ ಮಾರುಕಟ್ಟೆ ನಿರ್ಮಿಸಿ ನಗರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಮಹಾದಾಸೆ ನನ್ನದು. ಎಲ್ಲ ವ್ಯಾಪಾರಸ್ಥರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ವ್ಯಾಪಾರ ವೃದ್ಧೀಕರಣಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಾಗ ಸಿಎಂ ಸಿದ್ಧರಾಮಯ್ಯ, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರಿಗೆ ೨೭ಕೋಟಿ ೬೮ಲಕ್ಷ ರೂ. ಪ್ರಸ್ಥಾವನೆ ಸಲ್ಲಿಸಿದ್ದು, ಮೊದಲನೆ ಹಂತದಲ್ಲಿ ೫ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು ೧೩೨ಮಳಿಗೆಗಳ ಕಟ್ಟಡ ನಿರ್ಮಾಣವಾಗುತ್ತದೆ. ಮೊದನೆಯ ಹಂತದಲ್ಲಿ ೩೦ಮಳಿಗೆಗಳು ನಿರ್ಮಾಣವಾಗುತ್ತವೆ. ಮುಂದಿನ ಹಂತದಲ್ಲಿ ಉಳಿದ ಅನುದಾನವನ್ನು ತಂದು ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕಾರ್ಯಮಾಡಲಾಗುವುದು. ಗ್ಯಾರಂಟಿಗಳಿAದ ಸರ್ಕಾರದಲ್ಲಿ ದುಡ್ಡಿಲ್ಲವೆಂದು ವಿರೋಧ ಪಕ್ಷದವರು ಅಭಿವೃದ್ಧಿಗಾಗಿ, ರೈತರಿಗಾಗಿ, ರಸ್ತೆ ನಿರ್ಮಿಸುವುದಕ್ಕಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಟೀಕೆ ಮಾಡುತ್ತಾರೆ. ೧೯೭೧ರಲ್ಲಿ ಪ್ರಾರಂಭವಾದ ಸಿಂದಗಿ ಪುರಸಭೆ ಕಳೆದ ತಿಂಗಳ ಹಿಂದೆ ನಗರಸಭೆಯಾಗಿ ಘೋಷಣೆಯಾಗಿದ್ದು ಸಂತಸ ತಂದಿದೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಸಿಂದಗಿ ನಗರವು ಸೌಂದರ್ಯಿಕರಣದತ್ತ ಸಾಗುತ್ತಿದೆ. ಇಂತಹ ಮಳಿಗೆಗಳಿಂದ ಪುರಸಭೆಗೆ ಹೆಚ್ಚಿನ ಆದಾಯವಾಗುತ್ತದೆ. ಇದರಿಂದ ಮತ್ತಷ್ಟು ಸಿಂದಗಿ ನಗರವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದರು. ಪುರಸಭೆ ಸಾಮಾನ್ಯ ಅನುದಾನದಲ್ಲಿ ೧ಕೋಟಿ ೨೦ಲಕ್ಷ ರೂ. ೨೦ಮಳಿಗೆ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಸಂದೀಪ ಚೌರ, ಸದಸ್ಯರಾದ ಹಣಮಂತ ಸುಣಗಾರ, ಬಾಷಾಸಾಬ ತಾಂಬೊಳ್ಳಿ, ಹಾಸಿಂಪೀರ ಆಳಂದ, ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ, ಸಿದ್ದು ಮಲ್ಲೇದ, ಚನ್ನಪ್ಪ ಗೋಣಿ, ರಹಿಮ್ ದುದನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಪ್ರವೀಣ ಕಂಠಿಗೊಂಡ, ಸಾಯಬಣ್ಣ ಪುರದಾಳ, ಮಹಾನಂದ ಬಮ್ಮಣ್ಣಿ, ಚಂದ್ರಶೇಖರ ದೇವರೆಡ್ಡಿ, ಶಾಂತೂ ರಾಣಾಗೋಳ, ಜಯಶ್ರೀ ಹದನೂರ, ಶರಣಪ್ಪ ವಾರದ, ಬಾಬು ಕಮತಗಿ ಸೇರಿದಂತೆ ಅನೇಕರು ಇದ್ದರು.