ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ವಿಷಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಂಗಭೂಮಿಯ ಮೇಲೆ ತಮ್ಮದೇ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಜಿಲ್ಲೆಯ ಹೆಮ್ಮೆಯ ಕಲಾವಿದ ರಾಜು ತಾಳಿಕೋಟಿ ಸಾವಿನಿಂದ ರಂಗಭೂಮಿ ಬಡವಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ವಿಷಾದಿಸಿದರು.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ನಿಧನರಾಗಿರುವ ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ಹಾಸ್ಯದ ಮೂಲಕ ಸಮಾಜದ ಲೋಪ ತಿದ್ದುವ ಮಹತ್ವದ ಸೇವೆ ಮಾಡಿದ್ದರು. ರಂಗಭೂಮಿ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದರು. ಬಡತನದಲ್ಲಿ ಹುಟ್ಟಿ, ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹ ಮಾಡಿ, ಸ್ವಂತ ನಾಟಕ ಕಂಪನಿ ಕಟ್ಟಿ ಬೆಳೆಸಿದ್ದರು. ತಮ್ಮ ಕಷ್ಟದ ಮಧ್ಯೆಯೇ ಕುಟುಂಬದ ನಿರ್ವಹಣೆ ಮಾಡುತ್ತ, ಸಾಮಾಜಿಕ ಸೇವೆಯಲ್ಲೂ ತೊಡಗಿದ್ದರು. ಹಾಸ್ಯ ಕಲಾವಿದರಾಗಿ ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕಕ್ಕೆ ತಮ್ಮ ಸಾಧನೆಯಿಂದ ಕೀರ್ತಿ ತಂದಿದ್ದರು. ಅವರ ಅಗಲಿಕೆ ನಾಡಿನ ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಗೌತಮ್ ಆರ್.ಚೌಧರಿ ಸಂತಾಪ ವ್ಯಕ್ತಪಡಿಸಿದ್ದಾರೆ.