ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಮುಂದೆ ಅನೇಕ ಸೌಲಭ್ಯಗಳಿದ್ದು, ಅವನ್ನು ಹೇಗೆ ಉಪಯೋಗಿಸಬೇಕೆಂಬ ಜಾಣ್ಮೆ ನಮ್ಮಲ್ಲಿರಬೇಕು ಎಂದು ಐಕ್ಯೂಎಸಿ ನಿರ್ದೇಶಕ ಪ್ರೊ.ಪಿ.ಜಿ. ತಡಸದ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಒರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ವಿಭಾಗವು ವಿಶಾಲವಾದ ಸಾಗರದಂತಿದೆ. ಈ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರಿಗೆ ತಮ್ಮ ಪ್ರತಿಭೆಯನ್ನು ಅರಿತುಕೊಳ್ಳಲು, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನೇಕ ಅವಕಾಶಗಳು ಲಭ್ಯವಿವೆ. ಇಂದಿನ ಯುಗದಲ್ಲಿ ಮಾಹಿತಿ, ತಂತ್ರಜ್ಞಾನ ಮತ್ತು ಸಂವಹನದ ಜ್ಞಾನವು ಅತ್ಯಗತ್ಯವಾಗಿರುವುದರಿಂದ, ವಿದ್ಯಾರ್ಥಿನಿಯರು ತಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ, ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು, ಬದಲಾಗುತ್ತಿರುವ ಮಾಧ್ಯಮ ಲೋಕಕ್ಕೆ ತಕ್ಕ ರೀತಿಯಲ್ಲಿ ಸಜ್ಜಾಗಬೇಕು. ಅಷ್ಟೇ ಅಲ್ಲದೇ ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಉಚ್ಚರಿಸಲು ಕಲಿಯಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ಒಬ್ಬ ಉತ್ತಮ ಸಂವಹನಕಾರನಾಗಬೇಕಾದರೆ ಉತ್ತಮ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮ ಲೋಕದಲ್ಲಿ ಸಾವಿರಾರು ಅವಕಾಶಗಳಿದ್ದು, ಅವುಗಳನ್ನು ನಮ್ಮದಾಗಿಸಿಕೊಳ್ಳುವುದು ಸಂಪೂರ್ಣವಾಗಿ ನಮ್ಮ ಕೈಯಲ್ಲಿದೆ. ಕೌಶಲ್ಯಗಳನ್ನು ಕಲಿತು ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ. ಮಾಧ್ಯಮ ಕ್ಷೇತ್ರವು ಕೌಶಲ್ಯಗಳ ಆಗರವಾಗಿದೆ. ಅದನ್ನು ಅರಿತುಕೊಂಡರೆ ನಮ್ಮ ವೃತ್ತಿಜೀವನಕ್ಕೆ ಹೊಸ ದಾರಿಗಳು ಸೃಷ್ಠಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ನಿಗಾರ ಸುಲ್ತಾನ, ಸಂದೀಪ ನಾಯಕ, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ ನಿರೂಪಿಸಿದರು.