ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಉತ್ತರ ಕರ್ನಾಟಕ ಪ್ರಸಿದ್ಧ ಪ್ರವಾಸಿ ತಾಣ ಆಲಮಟ್ಟಿಯಲ್ಲಿ ಯಾತ್ರಿ ನಿವಾಸ, ಡಾರ್ಮೆಟರಿ, ಸಮುದಾಯ ಭವನ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಮಂಗಳವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ, ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಆಲಮಟ್ಟಿಗೆ ಪ್ರತಿವರ್ಷ ೫ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ನವ್ಹಂಬರ್ , ಡಿಸೆಂಬರ್ ನಲ್ಲಿ ರಾಜ್ಯದ ಬಹುತೇಕ ಕಡೆಗಳಿಂದ ಸಹಸ್ರಾರು ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸುತ್ತಾರೆ, ಅವರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ, ಗುಡಿ ಗುಂಡಾರ, ರಸ್ತೆ ಬದಿ ಮಲಗುವ ಸ್ಥಿತಿ ಇದೆ. ಸಂಗೀತ ಕಾರಂಜಿ ಮತ್ತೀತರ ವೀಕ್ಷಣೆ ಮುಗಿಯುವುದು ರಾತ್ರಿ ೮ ಕ್ಕೆ, ಆಗ ಯಾವುದೇ ಬಸ್ ಸೌಕರ್ಯಗಳು ಇಲ್ಲ, ಜತೆಗೆ ವಾಸ್ತವ್ಯಕ್ಕೆ ಯಾತ್ರಿನಿವಾಸವೂ ಇಲ್ಲ. ಹೀಗಾಗಿ ಇಲ್ಲಿ ವಸತಿ ವ್ಯವಸ್ಥೆ, ಡಾರ್ಮೆಟರಿ, ಸಮುದಾಯ ಭವನ ನಿರ್ಮಿಸುವಂತೆ ಚಂದ್ರಶೇಖರ ನುಗ್ಗಲಿ ಮನವಿ ಮಾಡಿದರು.
ಆಲಮಟ್ಟಿಯಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಇದರ ಜತೆಗೆ ಆಲಮಟ್ಟಿ ಸನಿಹದಲ್ಲಿಯೇ ಪ್ರಸಿದ್ಧ ಯಲಗೂರ ಹಾಗೂ ಯಲ್ಲಮ್ಮನ ಬೂದಿಹಾಳ ದೇವಸ್ಥಾನಗಳಿದ್ದು, ಅಲ್ಲಿಯೂ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ, ಅಗತ್ಯ ಇರುವೆಡೆ ಮೂಲಸೌಕರ್ಯ ಕಲ್ಪಿಸುವುದು ನಿಗಮದ ಮೂಲ ಉದ್ದೇಶವಾಗಿದ್ದು, ನಿಗಮದ ವತಿಯಿಂದ ಐಹೊಳೆ ಮತ್ತು ಬದಾಮಿ ಸೇರಿದಂತೆ ನಾನಾ ಕಡೆ ಹೋಟೆಲ್ ನಿರ್ಮಿಸಲಾಗುತ್ತಿದೆ. ಬಾಗಲಕೋಟೆಯಲ್ಲೂ ಹೋಟೆಲ್ ನಿರ್ಮಿಸುವ ಉದ್ದೇಶವಿದೆ. ಆಲಮಟ್ಟಿಯೂ ಉತ್ತರ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿಯೂ ನಿತ್ಯ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ, ಅವರಿಗಾಗಿ ಯಾತ್ರಿ ನಿವಾಸ, ಡಾರ್ಮೆಟರಿ, ಹೋಟೆಲ್ ನಿರ್ಮಿಸಲು ೧೦ ಎಕರೆ ಜಾಗದ ಅವಶ್ಯಕತೆಯಿದ್ದು, ಅಷ್ಟು ಜಾಗ ಕೃಷ್ಣಾ ಭಾಗ್ಯ ಜಲ ನಿಗಮ ಒದಗಿಸಿದರೇ, ಮುಂದಿನ ಆರ್ಥಿಕ ವರ್ಷದಲ್ಲೇ ಕಾಮಗಾರಿ ಆರಂಭಿಸುತ್ತೇವೆ. ೧೦ ಎಕರೆ ಜಾಗ ನಿಗಮಕ್ಕೆ ಒದಗಿಸಲು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ್ ಅವರಿಗೆ ಸ್ವತಃ ನಾನೇ ಹೋಗಿ ಭೇಟಿ ಮಾಡಿ, ಆಲಮಟ್ಟಿಯಲ್ಲಿ ಮೂಲಸೌಕರ್ಯ ಒದಗಿಸಲು ಅಗತ್ಯ ಭೂಮಿ ಒದಗಿಸಲು ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಂ. ಲೋಕಣ್ಣವರ, ಚಂದ್ರಶೇಖರ ಕೋಳೇಕರ, ಎ.ಎಂ. ಹೂಲಿಕಟ್ಟಿ ಮತ್ತಿತರರು ಇದ್ದರು.
ಆಲಮಟ್ಟಿಯಲ್ಲಿ ಯಾತ್ರಿ ನಿವಾಸ ಸೇರಿದಂತೆ ನಾನಾ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಿಗಮದ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ ಅವರಿಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಸನ್ಮಾನಿಸಿ ಮನವಿ ಸಲ್ಲಿಸಿದರು.
ಆಲಮಟ್ಟಿಯ ವಿವಿಧ ಮೂಲಸೌಕರ್ಯ ಒದಗಿಸುವ ಕುರಿತು, ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ ಅವರ ಜತೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮತ್ತಿತರರು ಚರ್ಚಿಸಿದರು.