ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಲಾಖೆಯ ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಪೂರ್ಣ ಯೋಜನೆಗಳು ಸಮುದಾಯಕ್ಕೆ ಬಹಳ ಉಪಯೋಗವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಚೌಕಿಮಠದಲ್ಲಿ ಸೋಮವಾರ ಜರುಗಿದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭವಾಗುತ್ತವೆ. ಮಗುವಿನ ಸಂಪೂರ್ಣ ಬೆಳವಣಿಗೆ ಅಂಗನವಾಡಿಯಲ್ಲಿಯೇ ಆಗುತ್ತದೆ ಎಂದರು.
ಸಿಂದಗಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಕೆ.ಹಳ್ಳಿ ಮಾತನಾಡಿ, ಪೋಷಣ ಮಾಸಾಚಾರಣೆ ಕಾರ್ಯಕ್ರಮ ೨೦೧೮ ರಲ್ಲಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಿಂದ ಕಿಶೋರಿಯರು, ಬಾಣಂತಿಯರು, ೬ ವರ್ಷದ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
ಗ್ರಾಮದ ರಾಜಶೇಖರಗೌಡ ಪೋ.ಪಾಟೀಲ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳು ಜಿಲ್ಲೆಗೆ ಮಾದರಿಯಾಗಿವೆ. ಸಮುದಾಯದ ಸಹಕಾರದಿಂದ ಮಕ್ಕಳ ಕಲಿಕೆ ಉತ್ತಮ ರೀತಿಯಲ್ಲಿ ಇದೆ ಎಂದರು.
ಯೋಜನೆಯ ವಿವಿಧ ಕಾರ್ಯಕ್ರಮಗಳಾದ ಮೂರು ವರ್ಷದ ಮಕ್ಕಳಿಗೆ ಅಕ್ಷರ ಬರಹ, ಅನ್ನ ಪ್ರಾಶನ, ಹೆಣ್ಣು ಮಗುವಿನ ಹುಟ್ಟುಹಬ್ಬ, ಗರ್ಭಿಣಿಯರಿಗೆ ಸೀಮಂತ, ಮಕ್ಕಳ ನೃತ್ಯ, ಕುಣಿತ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಗ್ರಾಮ ಪಂಚಾಯಿತಿ ಲೆಕ್ಕಿಗ ಮುನ್ನಾ ಟಕ್ಕಳಕಿ ಸನ್ಮಾನಿಸಿದರು. ಜೊತೆಗೆ ಅಂಗನವಾಡಿ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು .
ಬಾಪುಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಭೀಮನಗೌಡ ಕುಳೇಕುಮಟಗಿ, ರಾಜಶೇಖರ ಛಾಯಗೋಳ, ಶ್ರೀನಾಥಗೌಡ ಪಾಟೀಲ, ಡಾ.ಅಶೋಕ ಕುಳೇಕುಮಟಗಿ, ಛತ್ರಪ್ಪ, ಯಾಶೀನ ವಡಗೇರಿ, ಮಾನಂದ ನಾಯ್ಕಲ್, ಮಸನಪ್ಪ ಮನಹಳ್ಳಿ, ಸಂಗಪ್ಪಗೌಡ ಬಿರಾದಾರ, ವಿ.ಎಸ್.ಕುಲಕರ್ಣಿ, ಹಿರಿಯ ಮೇಲ್ವಿಚಾರಕಿ ಸುಧಾ ಬಾವಿಕಟ್ಟಿ. ಆರೋಗ್ಯ ಇಲಾಖೆಯ ಮೇಲ್ವಿಚಾರಕ ಕೆ.ಎಸ್.ಕಟ್ಟಿಮನಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವ್ಹಿ.ಪಟ್ಟಣಶೆಟ್ಟಿ, ಸ್ನೇಹ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ, ವಲಯ ಮೇಲ್ವಿಚಾರಕಿ ಶಹಜಾದ ಕಾಗಲ್ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು.