ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಸಂಸ್ಕಾರವಂತ ವ್ಯಕ್ತಿ ನಿರ್ಮಾಣವಾದಾಗ ಮಾತ್ರ ಈ ದೇಶ ಉಳಿಯಲು ಸಾಧ್ಯ ಎಂಬ ಉದ್ದೇಶದಿಂದ ಡಾ.ಹೆಡಗೆವಾರ್ ಹುಟ್ಟು ಹಾಕಿದ ಆರ್‌ಎಸ್‌ಎಸ್‌ನ ನೂರನೇ ವರ್ಷದ ಸಂಭ್ರಮದಲ್ಲಿದ್ದೇವೆ ಎಂದು ವಿಜಯಪುರ ವಿಭಾಗ ಪ್ರಚಾರಕ ರಾವಸಾಹೇಬ ಹೇಳಿದರು.
ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಜರುಗಿದ ವಿಜಯದಶಮಿ ಉತ್ಸವ ಹಾಗೂ ಸಂಘಶತಾಬ್ದಿ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.
ದೇಶ, ಧರ್ಮ, ಗ್ರಾಮ, ಮನೆ ಚೆನ್ನಾಗಿ ಇರಬೇಕೆಂದರೆ ಉತ್ತಮ ವ್ಯಕ್ತಿಯಿಂದ ಮಾತ್ರ ಸಾಧ್ಯ. ಅದಕ್ಕಾಗಿ ಆರ್‌ಎಸ್‌ಎಸ್ ಪ್ರತಿ ಗ್ರಾಮದಲ್ಲಿ ಶಾಖೆ ಆರಂಭಿಸಿ ವ್ಯಕ್ತಿನಿರ್ಮಾಣ ಕಾರ್ಯ ಮಾಡುತ್ತಿದೆ. ಇದರ ಪರಿಣಾಮ ಪ್ರತಿಯೊಬ್ಬ ಸ್ವಯಂಸೇವಕನು ಕೂಡ ಭಾರತಮಾತೆ ನನ್ನ ತಾಯಿ, ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ನನ್ನ ಸಹೋದರ, ಸಹೋದರಿ ಇದ್ದಂತೆ. ಇವರ ಜೊತೆ ಯಾವುದೇ ತರದ ಬೇಧ ಭಾವ ಇಲ್ಲದೆ ಸಮಾನತೆಯಿಂದ ನಾವೆಲ್ಲರೂ ಹಿಂದೂ ನಾವೆಲ್ಲರೂ ಬಂಧು ಎಂಬ ಭಾವದಿಂದ ದೇಶ, ಧರ್ಮಕ್ಕೋಸ್ಕರ ಸೇವೆ ಸಲ್ಲಿಸುತ್ತಿದ್ದಾನೆ. ಇಡೀ ವಿಶ್ವದಲ್ಲಿಯೇ ನೂರುವರ್ಷ ಪೂರೈಸಿದ ಏಕೈಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂಥ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ದೇಶ ವಿದೇಶದಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಸ್ವಯಂಸೇವಕರಿದ್ದಾರೆ ಲಕ್ಷಾಂತರ ಶಾಖೆಗಳು ನಡೆಯುತ್ತಿದೆ. ದೇಶ ಹಾಗೂ ಧರ್ಮಕ್ಕೆ ಸಂಕಷ್ಟ ಬಂದಾಗ ಸ್ವಯಂಸೇವಕರು ಯಾವುದೇ ಫಲಾಪೇಕ್ಷೆ ಬೇಡದೇ ದೇಶ ಹಾಗೂ ಧರ್ಮ ರಕ್ಷಣೆಗೆ ನಿಲ್ಲುತ್ತಾರೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ (ಜಲಕತ್ತಿ) ಸಹಿತ ಸುಮಾರು ಸಂಖ್ಯೆಯಲ್ಲಿ ಗಣವೇಶಧಾರಿಗಳು ಪಾಲ್ಗೊಂಡಿದ್ದರು.
ಸಂಘದ ಪ್ರಮುಖ ಗುರುರಾಜ ದೇಸಾಯಿ ಸ್ವಾಗತಿಸಿದರು. ಚಿದಾನಂದ ಕುಂಬಾರ ವಂದಿಸಿದರು.