ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಬೀಳ್ಕೊಡುಗೆ ಸಮಾರಂಭ ಕೇವಲ ವಿದಾಯದ ಕಾರ್ಯಕ್ರಮವಲ್ಲ. ಅದು ಸ್ನೇಹ ಕೃತಜ್ಞತೆ ಮತ್ತು ಪ್ರೇರಣೆಯ ಹಬ್ಬವಾಗಿದೆ ಎಂದು ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಂಯೋಜಕ ಎನ್.ಪಿ.ಹೊನ್ನಾಕಟ್ಟಿ ಹೇಳಿದರು.
ಸಿಂದಗಿ ಪಟ್ಟಣದ ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿ.ಇಡಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸರ್ಕಾರಗಳು ಮಾಡದೇ ಇರುವ ಕಾರ್ಯಗಳನ್ನು ಮಠ-ಮಂದಿರಗಳು ಮಾಡುತ್ತಿರುವುದು ಶ್ಲಾಘನಿಯವಾಗಿದೆ. ಸಿಂದಗಿಯ ಸಾರಂಗಮಠ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ. ಶಿಕ್ಷಕರಾಗುವವರು ಸದಾ ಅಧ್ಯಯನಶೀಲರಾಗಬೇಕು. ಮತ್ತು ಸಮುದಾಯವನ್ನು ಒಗ್ಗೂಡಿಸಿ ಕೆಲಸ ಮಾಡಬೇಕು ಎಂದರು.
ಸಮಾರಂಭದ ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಘೂ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಗಂಗಾಧರ ಜೋಗೂರ, ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಕಾರ್ಯಾಧ್ಯಕ್ಷ ಸುಧಾಕರ ಚವ್ಹಾಣ, ಪ್ರಧಾನ ಕಾರ್ಯದರ್ಶಿ ರಮೇಶ ನಾರಾಯಣಪೂರ, ಬಿ.ಎಮ್.ಸಿಂಗನಳ್ಳಿ, ಡಾ.ಶರಣಬಸವ ಜೋಗೂರ, ದಾನಯ್ಯ ಮಠಪತಿ, ಪ್ರಶಾಂತ ಕುಲಕರ್ಣಿ, ಆರ್.ಎ.ಹಾಲಕೇರಿ, ಬಿ.ಎಸ್.ದಸ್ಮಾ, ನಾಜಿಯಾ ಮುಲ್ಲಾ, ಎಸ್.ವ್ಹಿ.ರೆಬಿನಾಳ, ಸಿ.ಜಿ.ಕತ್ತಿ, ಶಿವಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.