ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಆಯೋಜಿಸಿದ ಸಚಿವ ಎಂ.ಬಿ.ಪಾಟೀಲ ಜನ್ಮದಿನಾಚರಣೆ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಆಶಯದಂತೆ ಅಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯಡಿ ಕುಟುಂಬದ ಆರೋಗ್ಯ ಕಾರ್ಡ್(Family Health Card) ವಿತರಿಸಲಾಗುತ್ತಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಇಂದು ಶನಿವಾರ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಶ್ರೀ ಎಂ. ಬಿ. ಪಾಟೀಲ ಅವರ ಜನ್ಮದಿನಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗವುದನ್ನು ತಪ್ಪಿಸಲು ಮತ್ತು ಅವರಿಗೆ ಸುಲಭದಲ್ಲಿ ಉತ್ತಮ ಓರೋಗ್ಯ ಸೇವೆ ಹಾಗೂ ಚಿಕಿತ್ಸೆ ಒದಗಿಸಲು ಎಂ. ಬಿ. ಪಾಟೀಲರು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ರೋಗಿಗಳಿಗೆ ಭವಿಷ್ಯದಲ್ಲಿಯೂ ಉತ್ತಮ ಆರೋಗ್ಯ ಸೇವೆ ಸಿಗುವಂತ ಮಾಡಲು ಈಗ ಕುಟುಂಬ ಆರೋಗ್ಯ ಕಾರ್ಡ್ ನೀಡಲು ಕ್ರಮ ಸೂಚನೆ ನೀಡಿದ್ದು, ಅದರಂತೆ ಈಗ ಅಸಂಘಟಿತ ಕಾರ್ಮಿಕರ ನಾನಾ ಸಂಘಟನೆಗಳ ಸದಸ್ಯರಿಗೆ ಫ್ಯಾಮಿಲಿ ಹೆಲ್ತ್ ಕಾರ್ಡ್ ವಿತರಿಸಲಾಗುತ್ತಿದೆ. ಅಲ್ಲದೇ, ಸಚಿವರ ಜನ್ಮದಿನದ ಅಂಗವಾಗಿ ಯಾವುದೇ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಮತ್ತು ದಾಖಲಾಗುವ ರೋಗಿಗಳ ಅನುಕೂಲಕ್ಕಾಗಿ ಈ ವರ್ಷದಿಂದ ರೂ. 1 ಕೋ. ಹಣ ಮೀಸಲಿಡಲಾಗುವುದು ಎಂದು ಅವರು ತಿಳಿಸಿದರು.
ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಫ್ಯಾಮಿಲಿ ಹೆಲ್ತ್ ಕಾರ್ಡ್ ಹೊಂದಿದ 4500 ಸದಸ್ಯರಿಗೆ ಚಿಕಿತ್ಸೆ, ಶಸ್ತ್ರಿಚಿಕಿತ್ಸೆಗಾಗಿ ರೂ. 1. ಕೋ. ಗಿಂತಲೂ ಹೆಚ್ಚು ಹಣವನ್ನು ಆಸ್ಪತ್ರೆ ವತಿಯಿಂದ ಖರ್ಚು ಮಾಡಲಾಗಿದೆ. ಜಲ, ವೃಕ್ಷ, ಶಿಕ್ಷಣ, ಆರೋಗ್ಯ ಧ್ಯೇಯವಾಕ್ಯದೊಂದಿಗೆ ಎಂ. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿವಿ ಕೆಲಸ ಮಾಡುತ್ತಿದ್ದು, ಈ ಬಾರಿ ಅಸಂಘಟಿತ ವಲಯದ ಕಾರ್ಮಿಕರಾದ ಅಟೋ ಚಾಲಕರು, ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರ, ಕಾರ್ಯನಿರತ ಪತ್ರಕರ್ತರು, ಟಾಟಾ ಏಸ್ ವಾಹನ ಚಾಲಕರು, ಕೇಂದ್ರೀಯ ಅರೆಸೇನಾ ಪಡೆಗಳ ಮಾಜೀ ಯೋಧರ ನಾನಾ ಸಂಘಗಳ ಸದಸ್ಯರಿಗೆ ಫ್ಯಾಮಿಲಿ ಹೆಲ್ತ್ ಕಾರ್ಡ್ ವಿತರಿಸಲಾಗುತ್ತಿದೆ. ಈ ಕಾರ್ಡು ಪಡೆಯುವುದರಿಂದ ಹೊರ ರೋಗಿಗಳ ನೋಂದಣಿ, ಸಾಮಾನ್ಯ ವಾರ್ಡ್ ದಾಖಲಾತಿ, ದಾದಿಯರ, ವೈದ್ಯರ ಸೇವೆ ಹಾಗೂ ಹಾಸಿಗೆ ಶುಲ್ಕ, ಲಘು ಶಸ್ತ್ರಚಿಕಿತ್ಸೆಗಳು, ರೋಗಿಗೆ ಮಾತ್ರ ಅಲ್ಪೋಪಹಾರ, ಮಧ್ಯಾಹ್ನದ ಹಾಗೂ ರಾತ್ರಿಯ ಊಟ ಉಚಿತವಾಗಿ ಸಿಗಲಿದೆ. ಅಲ್ಲದೇ, ರಿಯಾಯಿತಿ ದರದಲ್ಲಿ ಪ್ರಾಥಮಿಕ ಹಾಗೂ ವಿಶೇಷ ರಕ್ತ ತಪಾಸಣೆತಪಾಸಣೆ, ದೊಡ್ಡ ಚಿಕಿತ್ಸೆಗಳ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಟೋ ಚಾಲಕ ಸಂಘ, ಬಿಜಾಪುರ ನಗರ ಗೃಹ ಕಾರ್ಮಿಕರ ಯುನಿಯನ್, ಮಹಾತ್ಮ ಗಾಂಧೀ ಅಟೋ ಚಾಲಕರ ಯುನಿಯನ್, ಕಟ್ಟಡ ಕಾರ್ಮಿಕರ ಸಂಘ, ವಿಜಯಪುರ ಕಟ್ಟಡ ಕಾರ್ಮಿಕ ಸಂಘ, ಸಮರ್ಥ ಕಟ್ಟಡ ಕಾರ್ಮಿಕ ಸಂಘ, ನವಜೀವನ ಕಟ್ಟಡ ಕಾರ್ಮಿಕ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಡಾ. ಅಂಬೇಡ್ಕರ್ ಟಾಟಾ ಏಸ್ ವಾಹನ ಚಾಲಕರ ಸಂಘ, ಕೇಂದ್ರೀಯ ಅರೆಸೇನಾ ಪಡೆಗಳ ಮಾಜf ಯೋಧರ ಸಂಘ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಕುಟುಂಬ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪಾರ್ಚಾರ್ಯ ಡಾ. ಅರವಿಂದ ಪಾಟೀಲ, ರಜಿಸ್ಚ್ರಾರ ಡಾ. ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ರೋಗ ನಿರ್ವಹಣೆ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ ಉಪಸ್ಥಿತರಿದ್ದರು.
*ರಕ್ತದಾನ ಶಿಬಿರ*
ಈ ಮಧ್ಯೆ ಶ್ರೀ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಎಂ. ಬಿ. ಪಾಟೀಲ ಅವರ ಅಭಿಮಾನಿಗಳು, ಬೆಂಬಗಲಿಗರು ಮತ್ತು ಸಾರ್ವಜನಿಕರು ಸೇರಿ 105ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
![IMG 20231008 WA0001](https://udayarashminews.com/wp-content/uploads/2023/10/IMG-20231008-WA0001-1024x580.jpg)