ನೀರಾವರಿ ಮತ್ತು ಕೋಟಿ ವೃಕ್ಷ ಅಭಿಯಾನದ ಫಲ | ಬ್ರೆಜಿಲ್ ವಿಜ್ಞಾನಿ ಬೆನೆಡಿಟೊ ಎಚ್. ಮಚಾಡೊ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀರಾವರಿ ಮತ್ತು ಕೋಟಿ ವೃಕ್ಷ ಅಭಿಯಾನದ ಫಲವಾಗಿ ಜಿಲ್ಲೆಯ ಪರಿಸರದಲ್ಲಿ ಗಣನೀಯ ಬದಲಾವಣೆಯಾಗಿದೆ ಎಂದು ಬ್ರೆಜಿಲ್ ಸಾ ಪಾಲೊ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಲಹೆಗಾರ ಮತ್ತು ವಿಜ್ಞಾನಿ ಬೆನೆಡಿಟೊ ಎಚ್. ಮಚಾಡೊ ಹೇಳಿದ್ದಾರೆ.
ಅಕ್ಟೋಬರ್ 6 ರಿಂದ ಅಕ್ಟೋಬರ್ 9ರ ವರೆಗೆ ನಗರಕ್ಕೆ ಭೇಟಿ ನೀಡಿದ ಅವರು, ತಮ್ಮ ಪತ್ನಿ ಮತ್ತು ಸಾ ಪಾಲೊ ವಿವಿಯ ಔಷಧ ರಸಾಯನಶಾಸ್ತ್ರ ವಿಭಾಗದ ನಿಕಟಪೂರ್ವ ಪ್ರಾಧ್ಯಾಪಕಿ ಪ್ರೊ.ಲೂಸಿಯಾನ್ ಎಂ. ಬೆನಧ್ಯಾಕ್ ಅವರೊಂದಿಗೆ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ನಾನಾ ವಿಭಾಗಗಳಲ್ಲಿ ನಡೆದ ವಿಚಾರ ವಿನಿಮಯ, ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಶರೀರ ಕ್ರಿಯಾ ಶಾಸ್ತ್ರ ವಿಭಾಗಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಪ್ರೊ. ಕುಸಾಲ ದಾಸ ಅವರು ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತ್ಯಾಧುನಿಕ ಪ್ರಯೋಗಾಲಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಮೆದುಳಿನ ನರ ಉಸಿರಾಟ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.
ಅಲ್ಲದೇ, ನಗರದ ನಾನಾ ಸ್ಥಳಗಳಿಗೆ ಭೇಟಿ ನೀಡಿದ ಅವರು, ಪುನಶ್ಚೇತನಗೊಳಿಸಲಾದ ಐತಿಹಾಸಿಕ ಬೇಗಂ ತಾಲಾಬ, ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಭರ್ತಿಯಾಗಿರುವ ಭೂತನಾಳ ಕೆರೆ, ಕೋಟಿ ವೃಕ್ಷ ಅಭಿಯಾನದಡಿ ಮಾನವ ನಿರ್ಮಿತ ಕರಾಡ ದೊಡ್ಡಿ ಅರಣ್ಯ ಪ್ರದೇಶ ಸೇರಿದಂತೆ ನಾನಾ ಪ್ರದೇಶಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು 20 ವರ್ಷಗಳ ಹಿಂದೆ ನಗರಕ್ಕೆ ಮೊದಲ ಬಾರಿಗೆ ಬಂದಾಗ ಇಲ್ಲಿ ಬರ ಪರಿಸ್ಥಿತಿ ಇತ್ತು. ಅಂದಿನ ದಿನಗಳಿಗೆ ಹೋಲಿಸಿದರೆ ಈಗ ಅಮೂಲಾಗ್ರ ಬದಲಾವಣೆಯಾಗಿದೆ. ಎಲ್ಲೆಡೆ ಹಸಿರಿನ ವಾತಾವರಣವಿದೆ. ಕೆರೆಗೆಳು ತುಂಬಿ ತುಳುಕುತ್ತಿವೆ. ಮಾನವ ನಿರ್ಮಿತ ಕಾಡುಗಳಲ್ಲಿ ಪ್ರಾಣಿ ಪಕ್ಷಿಗಳ ಕಲರವ ಸಂತಸ ತಂದಿದೆ. ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ಜಲಕ್ರಾಂತಿ ಮತ್ತು ಕೋಟಿ ವೃಕ್ಷ ಅಭಿಯಾನದ ಫಲ ಎಲ್ಲೆಡೆ ರಾರಾಜಿಸುತ್ತಿದೆ. ಇಂಥ ಸುಂದರ ಪರಿಸರ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಈ ಅವಧಿಯಲ್ಲಿ ಅವರು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಭಾರ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಅವರನ್ನು ಭೇಟಿ ಮಾಡಿ ಶೈಕ್ಷಣಿಕ ಮತ್ತು ಸಮಶೋಧನೆ ಕುರಿತು ವಿಚಾರ ವಿನಿಮಯ ನಡೆಸಿದರು. ಅಲ್ಲದೇ, ಬ್ರೆಜಿಲ್ ನ ಸಾ ಪಾಲೊ ವಿವಿ ಮಧ್ಯೆ ಭವಿಷ್ಯದಲ್ಲಿ ಸಹಭಾಗಿತ್ವದ ಕುರಿತು ಚರ್ಚೆ ನಡೆಸಿದರು.