ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಬಸ್‌ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕಲಕೇರಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳಾದ ಪ್ರಭುಗೌಡ ಪಾಟೀಲ ಲಿಂಗದಳ್ಳಿ ಅವರ ನೇತೃತ್ವದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಲಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಅಹ್ಮದ ಸಿರಸಗಿ ಅವರು, ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮವು ಸುಮಾರು ೨೦ ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಸುತ್ತಮುತ್ತಲಿನ ೪೦ ಹಳ್ಳಿಗಳಿಗೆ ಶಿಕ್ಷಣ, ವಾಣಿಜ್ಯ, ವ್ಯಾಪರಿ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ಜನರು ವಿವಿಧ ಕೆಲಸ ಕಾರ್ಯಗಳ ಮೇಲೆ ಬಸ್‌ಗಳ ಮೂಲಕ ಕಲಕೇರಿ ಗ್ರಾಮಕ್ಕೆ ಆಗಮಿಸುತ್ತಾರೆ, ಕಲಕೇರಿ ಗ್ರಾಮದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇರುವುದಿಲ್ಲ, ಇರುವ ಒಂದು ಶೌಚಾಲಯವೂ ಕೂಡಾ ಸುಮಾರು ತಿಂಗಳುಗಳಿಂದ ಬಾಗಿಲು ಮುಚ್ಚಿರುತ್ತದೆ.
ಅದೇ ರೀತಿ ಬಸ್ ನಿಲ್ದಾಣದ ಆವರಣ ತಗ್ಗು ದಿಣ್ಣೆಗಳಿಂದ ಕೂಡಿದ್ದು, ಮಳೆ ಬಂದರೆ ಸಾಕು ಕೆಸರು ಗದ್ದೆಯಂತಾಗುತ್ತದೆ. ಖಾಸಗಿ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ. ಬಸ್ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಶೌಚಾಲಯ, ಸ್ವಚ್ಛತೆ, ಸುಸಜ್ಜಿತ ಆಸನಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಹೆಂಗಸರು, ಮಕ್ಕಳು, ವೃದ್ಧರು ಪರದಾಡುವಂತಾಗಿದೆ. ನಿಲ್ದಾಣದಲ್ಲಿ ಅಂಗಡಿಗಳನ್ನು ಟೆಂಡರ್ ಮೂಲಕ ಬಾಡಿಗೆ ನೀಡಲಾಗಿದ್ದು, ಅಂಗಡಿಕಾರರು ಬಿಸಾಡುವ ಕಸ ಎಲ್ಲೆಂದರಲ್ಲಿ ಬಿದ್ದು ನಿಲ್ದಾಣವೆಲ್ಲ ಕಸದ ತಿಪ್ಪೆಯಂತಾಗಿದೆ. ಆದ ಕಾರಣ ಸನ್ಮಾನ್ಯ ಸಾರಿಗೆ ಇಲಾಖೆ ಸಚಿವರು ಇತ್ತ ಕಡೆ ಗಮನ ಹರಿಸಿ ಕಲಕೇರಿ ಗ್ರಾಮದ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕಲಕೇರಿ ಗ್ರಾಪಂ ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಈ ವೇಳೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳೂ ಆಗಿರುವ ಪ್ರಭುಗೌಡ ಪಾಟೀಲ ಲಿಂಗದಳ್ಳಿ ಹಾಗೂ ಗ್ರಾಪಂ ಸದಸ್ಯರಾದ ಚಾಂದಪಾಶಾ ಹವಾಲ್ದಾರ ಸೇರಿದಂತೆ ಇತರರು ಇದ್ದರು.
ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.