ಅಕ್ಕಮಹಾದೇವಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಭಾಷೆಗಳ ಜ್ಞಾನ ಹಾಗೂ ಸಂವಹನ ಕೌಶಲಗಳನ್ನು ಸಂಪಾದಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಲಾ ನಿಕಾಯದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ‘ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ: ಭಾಷಾ ಅಧ್ಯಯನದ ಮಹತ್ವ’ ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲಗಳು ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತವೆ. ವಿದ್ಯಾರ್ಥಿನಿಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು, ಕೌಶಲಗಳನ್ನು ಬೆಳೆಸಿಕೊಂಡು, ಹೊಸ ಜಗತ್ತಿನ ಸವಾಲುಗಳು ಮತ್ತು ಅವಕಾಶಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿಪರ ಕೌಶಲದ ಜೊತೆಗೆ ವ್ಯಕ್ತಿತ್ವದ ಕೌಶಲವನ್ನೂ ಮೈಗೂಡಿಸಿಕೊಳ್ಳಬೇಕು. ಉತ್ತಮ ಕೌಶಲಗಳು ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ತರಲು ನೆರವಾಗುತ್ತವೆ. ಕೌಶಲಗಳ ಅಭಿವೃದ್ದಿಯ ಮೂಲಕ ವ್ಯಕ್ತಿ ತನ್ನ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ಎಂದರು.
ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಅಮೃತ ಯಾರ್ದಿ ಮಾತನಾಡಿ, ಭಾಷೆಗಳ ಅಭ್ಯಾಸದಿಂದ ವ್ಯಕ್ತಿತ್ವವು ಪರಿಪೂರ್ಣವಾಗಿ ರೂಪುಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನಕ್ಕಾಗಿ ಬಹುಭಾಷಿತ್ವ ಅತ್ಯಂತ ಮಹತ್ವದ್ದಾಗಿದೆ. ಅನೇಕ ಭಾಷೆಗಳ ಜ್ಞಾನ ಹೊಂದಿರುವವರು ತಮ್ಮ ಸಂವಹನ ಕೌಶಲದ ಮೂಲಕ ಪರರಾಜ್ಯಗಳಲ್ಲಿಯೂ, ಪರದೇಶಗಳಲ್ಲಿಯೂ ಸಹ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯ ಎಂದರು.
ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಮಹೇಶ ಚಿಂತಾಮಣಿ, ಕಲಾ ನಿಕಾಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ.ನಾಮದೇವ ಗೌಡ, ಪ್ರೊ.ಎಂ. ನಾಗರಾಜ, ಡಾ. ನಾರಾಯಣ ಪವಾರ, ಡಾ ದೀಪಕ ಶಿಂದೆ, ಡಾ.ಅಮರನಾಥ್ ಪ್ರಜಾಪತಿ, ಡಾ. ಅಕ್ಷಯ ಯಾರ್ದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಹಾಗೂ ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ ಸ್ವಾಗತಿಸಿದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುಲಾಬ ರಾಠೋಡ ವಂದಿಸಿದರು.