ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ `ವಿಶ್ವಶಾಂತಿ ಅಗತ್ಯತೆ ಹಾಗೂ ವಿಶ್ವಶಾಂತಿಯಲ್ಲಿ ಭಾರತದ ಪಾತ್ರ’ ಕುರಿತು ಮಹತ್ವಪೂರ್ಣ ಸಂದೇಶ ಸಾರಿ ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ ಕುಮಾರಿ ಶಿಫಾ ಜಮಾದಾರ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ರಷ್ಯಾ, ಮಯನ್ಮಾರ್, ಅರ್ಮೇನಿಯಾ ಸೇರಿದಂತೆ ವಿವಿಧ ರಾಷ್ಟçಗಳ ರಾಷ್ಟಾçಧ್ಯಕ್ಷರ ಸಮ್ಮುಖದಲ್ಲಿ ವಿಜಯಪುರ ಯುವತಿ ಕು.ಶಿಫಾ ಜಮಾದಾರ ಅವರು ಸಮರ್ಥವಾಗಿ ಶಾಂತಿಯ ಮಂತ್ರ ಸಾರಿದ್ದು ಪ್ರತಿಯೊಬ್ಬ ವಿಜಯಪುರ ನಿವಾಸಿಗಳು ಅಷ್ಟೇ ಅಲ್ಲ ಇಡೀ ಕನ್ನಡ ನಾಡಿನ ಜನತೆ ಹೆಮ್ಮೆಪಡುವಂತಹ ವಿಷಯವಾಗಿದೆ, ವಿಜಯಪುರ ಪ್ರತಿಭಾವಂತರ ನೆಲ, ಜ್ಞಾನದ ಸಂಗಮ, ಈ ನಾಡಿನ ಹೆಮ್ಮೆಯ ಪ್ರತಿಭೆ ಶಿಫಾ ಜಮಾದಾರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಅರಿವು, ಶೈಕ್ಷಣಿಕ ಕಿಟ್ ವಿತರಣೆಯಂತಹ ಅನೇಕ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಂಡಿರುವುದನ್ನು ನಾನು ಗಮನಿಸಿದ್ದೇನೆ, ಶೈಕ್ಷಣಿಕ ಕಿಟ್ ವಿತರಣೆ ಕಾರ್ಯವನ್ನು ಮೆಚ್ಚಿ ನಾನು ಸಹ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಇದೇ ರೀತಿ ಸಮಾಜ ಸೇವೆಯಲ್ಲಿಯೂ ಸಹ ಸಕ್ರೀಯವಾಗಿ ತೊಡಗಿಸಿಕೊಂಡು, ಜ್ಞಾನ, ಯುವ ಸಬಲೀಕರಣದಂತಹ ಜ್ಞಾನಮುಖಿ ಸಮ್ಮೇಳನ, ಸಭೆಗಳಲ್ಲಿ ಭಾಗವಹಿಸುವ ಮೂಲಕ ಸಾಧನೆಯ ಪರಂಪರೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ವಿಜಯಪುರ ಜಿಲ್ಲೆ ಜನತೆಯ ಆಶೀರ್ವಾದ ಬಲ, ತಂದೆ-ತಾಯಿಯ ಬೆಂಬಲ, ಗುರು ಹಿರಿಯರ ಮಾರ್ಗದರ್ಶನದಿಂದ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು, ಅದು ಜೀವನದಲ್ಲಿ ಒಂದು ಅದ್ಭುತವಾದ ಅವಕಾಶ, ಈ ಅವಕಾಶ ಇನ್ನಷ್ಟೂ ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದು ಕು.ಶಿಫಾ ಜಮಾದಾರ ವಿವರಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ಅಕ್ರಂ ಮಾಶ್ಯಾಳಕರ, ಇಲಿಯಾಸ ಸಿದ್ದಿಕಿ, ಸುರೇಶ ಬಿಜಾಪೂರ ಮೊದಲಾದವರು ಉಪಸ್ಥಿತರಿದ್ದರು.