ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆದಿಂದ 2025-26 ನೇ ಸಾಲಿನ ಜೂನ ತಿಂಗಳಿನಿಂದ ಇದುವರೆಗೂ ಸುರಿದಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ನಷ್ಟಗೊಂಡ ರೈತರ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನಕಾರರು ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಆರಂಭಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತರು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆಗಳು ಸಂಪೂರ್ಣ ನಷ್ಟಗೊಂಡಿವೆ. ಜೊತೆಗೆ ಜಿಲ್ಲೆಯ ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಯ ಪ್ರವಾಹದಿಂದಾಗಿಯೂ ಸಾಕಷ್ಟು ಬೆಳೆ ನಷ್ಟಗೊಂಡಿವೆ. ಜಿಲ್ಲಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿ ಕೂಡಲೇ ಪರಿಹಾರ ಮತ್ತು ಫಸಲ್ ಭೀಮಾ ಯೀಜನೆಯಡಿ ವಿಮೆ ನೀಡಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ 13 ತಾಲೂಕಿನಲ್ಲಿ ಯಾವುದೇ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡದೇ ಪ್ರತಿಯೊಂದು ಹಳ್ಳಿಯ ಸರ್ವ ರೈತರಿಗೂ ಒಣ ಬೇಸಾಯಕ್ಕೆ 50 ಸಾವಿರ , ನೀರಾವರಿಗೆ 1 ಲಕ್ಷ ಹಾಗೂ ಬಹು ವಾಷಿಕ ಬೆಳೆಗಳಿಗೆ 2 ಲಕ್ಷ ನಷ್ಟ ಪರಿಹಾರ ನೀಡಬೇಕು. ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಹೆಸರಲ್ಲಿ ತಡ ಮಾಡದೇ ಕೂಡಲೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಈ ವರ್ಷ ಹಿಂದೆಂದೂ ಕಂಡು ಕಾಣರಿಯದಂತಹ ಮಳೆ ಹಾಗೂ ಪ್ರವಾಹ ಉಂಟಾಗಿ ಬಸವನಬಾಗೇವಾಡಿ ತಾಲೂಕಿನ ಎಲ್ಲಾ ರೈತರ ತೊಗರಿ, ಹತ್ತಿ, ಸೆಂಗಾ ಸೇರಿದಂತೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ಎಲ್ಲಾ ಬೆಳೆಗಳು ಮಳೆ ನೀರಿನಿಂದ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ, ಕೂಡಲೇ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದರು.
ರೈತ ಸಂಘದ ತಾಲೂಕಾ ಅಧ್ಯಕ್ಷ ಮುದಕಣ್ಣ ಹೊರ್ತಿ, ಮುತ್ತು ಹಾಲ್ಯಾಳ, ರೇವಣಸಿದ್ಧ ಮಣೂರ, ಜಿಲ್ಲಾ ಸಂಚಾಲಕ ಜಕರಾಯ ಪೂಜಾರಿ, ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕ ಸಂಗಪ್ಪ ಟಕ್ಕೆ, ನಗರ ಘಟಕದ ಅಧ್ಯಕ್ಷ ಸಚೀನ ಸವನಳ್ಳಿ, ತಾಲೂಕಾ ಉಪಾಧ್ಯಕ್ಷ ನಾಮದೇವ ರಾಠೋಡ,ಶಶಿಕಾಂತ ಬಿರಾದಾರ,ಬಸವರಾಜ ಅಂಬಲಿ, ಪರಶುರಾಮ ಗೊಳಸಂಗಿ, ರಾವುತ ಬರಗಿ, ಸಿದ್ದು ಕುಂಬಾರ, ಬಸವರಾಜ ಬಿಜಾಪುರ, ಬಸಪ್ಪ ಕಾರಜೋಳ, ಅಲ್ಲಾಭಕ್ಷ ಚಪ್ಪರಬಂದ, ದರೇಪ್ಪ ಹೊಸಮನಿ, ಕಾಶಿನಾಥ ಹಾರಿವಾಳ, ಮಲ್ಲಿಕಾರ್ಜುನ ಮೇಲ್ದಾಪುರ, ಕಲ್ಲಪ್ಪ ಉಳ್ಳಾಗಡ್ಡಿ, ದುಂಡಪ್ಪ ಗೊಳಸಂಗಿ, ಭೀರಪ್ಪ ಸಂಕನಾಳ, ಮುತ್ತಪ್ಪ ಶಟ್ಟೆಪ್ಪಗೋಳ,ವೀರಭದ್ರ ಬಡಿಗೇರ, ಮಾಳು ಬಸ್ತಾಳ, ಹಣಮಂತ ಹೊಸಮನಿ, ಶೇಕಪ್ಪ ಮಾದರ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.