ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಣ್ಣುಮಕ್ಕಳ ಮಾಸಿಕಚಕ್ರದ ಅವಧಿಯ ದೈಹಿಕ-ಮಾನಸಿಕ ವೇದನೆಗಳನ್ನು ಸಹನೀಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ‘ಋತುಚಕ್ರ ರಜೆ ನೀತಿ -2025’ ಜಾರಿಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ್ ಡಾಕ್ಟರ್ ಸೆಲ್ ಆಲಮೇಲ ಬ್ಲಾಕ್ ಅಧ್ಯಕ್ಷ ಡಾ ಸಮೀರ ಹಾದಿಮನಿ ಪ್ರತಿಕ್ರಿಯಿಸಿದರು.
ಸಾಮಾನ್ಯವಾಗಿ ಮುಟ್ಟಿನ ಅವಧಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ತೀವ್ರತರದ ಕಿಬ್ಬೊಟ್ಟೆ-ಸೊಂಟನೋವು, ವಾಕರಿಕೆ, ಆಯಾಸದ ಜೊತೆಗೆ ಮಾನಸಿಕವಾಗಿಯೂ ಜರ್ಜರಿತವಾಗುವರು. ಹಾರ್ಮೋನ್ ಗಳ ಅಸಮತೋಲನದಿಂದ ಈ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಅಧಿಕ ರಕ್ತಸ್ರಾವದೊಂದಿಗೆ ತೀವ್ರ ರೂಪ ಪಡೆಯುವವು.
ಇಂತಹ ಸಮಯದ ವೇತನ ಸಹಿತ ರಜೆ ನೀಡುವ ಕ್ರಮದಿಂದ ಆ ಮಹತ್ವದ ಒಂದು ದಿನ ಋತುಚಕ್ರದ ನೋವಿನಿಂದ ಚೇತರಿಸಿಕೊಳ್ಳಲು ಉಪಕಾರಿಯಾಗಿದೆ.ಗ್ರಾಮೀಣ ಭಾಗದ ಖಾಸಗಿ ಕಂಪನಿ-ಸಂಸ್ಥೆಗಳಲ್ಲಿಯೂ ಈ ನೀತಿಯ ಕಟ್ಟುನಿಟ್ಟಿನ ಅನುಷ್ಠಾನವಾಗಲಿ. ಈ ಕುರಿತು ವಿಶೇಷ ತಜ್ಞರ ವರದಿ ಸಿದ್ಧಪಡಿಸಿದ ಕಾರ್ಮಿಕ ಇಲಾಖೆಯ ಸಚಿವರಿಗೂ ಧನ್ಯವಾದಗಳು ಸಲ್ಲಿಸಿದ ಡಾ ಸಮೀರ ಹಾದಿಮನಿ, ಸರಕಾರದ ನೀತಿ ಇತರ ರಾಜ್ಯಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.